ಸುಳ್ಯ, ಜೂನ್ 29: ಆಧ್ಯಾತ್ಮಿಕ ನೇತಾರ,
ನೂರಾರು ಮೊಹಲ್ಲಾಗಳ ಖಾಝಿಗಳಾಗಿದ್ದ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಅವರ ಪ್ರಥಮ ಉರೂಸ್ ಕಾರ್ಯಕ್ರಮವು ಜೂನ್ 26 ರಂದು ಆರಂಭಗೊಂಡು ಇಂದು ಬಹಳ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಕೊನೇ ದಿನವಾದ ಇಂದು ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಸಂಘಟಕರ ನಿರೀಕ್ಷೆಗೂ ಮೀರಿ ರಾಜ್ಯದ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂತು. ಖುರ್ರತುಸ್ಸಾದಾತ್ ಯಾವ ರೀತಿಯಾಗಿ ಜನಮನಸ್ಸಲ್ಲಿ ಅಚ್ಚೊತ್ತಿ ನಿಂತಿದ್ದಾರೆಂಬುದಕ್ಕೆ ಇಂದು ಕುಗ್ರಾಮ ಕೂರತ್ ಸಾಕ್ಷಿಯಾಯಿತು!
ಎಡೆಬಿಡದೆ ಜನಸಾಗರ ಕೂರತ್ ಮಖಾಮಿನತ್ತ ಹರಿಯುತ್ತಲೇ ಇದ್ದವು.ಯಾರಿಂದಲೂ ನಿಯಂತ್ರಿಸಲಾಗದೆ ಜನಸಾಗರ ಉಕ್ಕಿ ಹರಿಯುತ್ತಿತ್ತು.
ಸ್ವಯಂ ಸೇವಕರು ಅಕ್ಷರಶಃ ಬಳಲಿ ಬೆಂಡಾಗಿದ್ದರು!
ಖುರ್ರತುಸ್ಸಾದಾತರ ಸಾನಿಧ್ಯ ಹರಸಿ ಬಂದವರು ಅಲ್ಲಿನ ತಬರ್ರುಕಿಗಾಗಿ ಮುಗಿಬಿದ್ದರು. ಉರೂಸು ಸಮಿತಿ ಬೇಕಾದಷ್ಟು ವ್ಯವಸ್ಥೆ ಮಾಡಿದ ಹೊರತಾಗಿಯೂ ನಿಯಂತ್ರಿಸಲಾಗದಷ್ಟು ಜನಸೇರಿತ್ತು. ಸ್ವಯಂ ಸೇವಕರ ಜೊತೆಗೆ ಪೋಲಿಸ್ ಅಧಿಕಾರಿಗಳು ಜನರನ್ನು ನಿಯಂತ್ರಿಸುವಲ್ಲಿ ಪಾಡುಪಡುತ್ತಿದ್ದರು.ಎರೆಡೆರಡು SI ಗಳು ಖುದ್ದು ನಿಂತು ಎಲ್ಲ ಕಡೆ ತೆರಳಿ ವಿಶ್ರಮವಿಲ್ಲದೆ ಓಡಾಡಿ ಎಲ್ಲವೂ ಅಚ್ಚುಕಟ್ಟಾಗುವಂತೆ ನೋಡಿಕೊಳ್ಳುತ್ತಿದ್ದರು.
ಬೆಳಗ್ಗಿನಿಂದಲೇ ಕೂರತ್‌ನಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಮದ್ಯಾಹ್ನದ ವೇಳೆಯಂತೂ ಸವಣೂರುವರೆಗೂ ಟ್ರಾಫಿಕ್ ಜಾಂ ಉಂಟಾಗಿತ್ತು. ಸ್ವಯಂ ಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರೂ ಜನದಟ್ಟಣೆಯಿಂದ ಸುಸೂತ್ರವಾಗಿ ನಿಭಾಯಿಸುವುದು ತ್ರಾಸದಾಯಕವಾಯಿತು. ಅನ್ನದಾನ ಸ್ವೀಕರಿಸಲು ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕ್ಯೂನಲ್ಲಿ ನಿಂತು ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಸಂಜೆ 6 ಗಂಟೆ ವರೆಗೂ ಅನ್ನದಾನ ವಿತರಣೆ ಎಂದು ತೀರ್ಮಾನಿಸಲಾಗಿತ್ತಾದರೂ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬರುತ್ತಿರುವುದರಿಂದ ರಾತ್ರಿ ವರೆಗೂ ಅನ್ನದಾನ ವಿತರಣೆ ನಡೆಸಲು ತೀರ್ಮಾನಿಸಲಾಯಿತು.
ಖುರ್ರತುಸ್ಸಾದಾತ್ ಕೂರತ್ ತಂಙಳ್ ಅವರು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ, ಇತರ ಧರ್ಮೀಯರಿಗೂ ಆಶ್ರಯವಾಗಿದ್ದರು. ಆದ್ದರಿಂದಲೇ ಮುಸ್ಲಿಮರು ಮಾತ್ರವಲ್ಲದೇ ಇತರ ಧರ್ಮಗಳ ಬಾಂಧವರು ಕೂಡಾ ಆಗಮಿಸಿ ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಪೊಲೀಸ್ ಇಲಾಖೆಯ ಮನವಿ:
ಭಾನುವಾರ ನಡೆದ ಉರೂಸ್ ಸಮಾರೋಪ ಕಾರ್ಯಕ್ರಮದಲ್ಲಿ ಜನದಟ್ಟಣೆಯಿಂದ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಈ ಬಗ್ಗೆ ಯಾವುದೇ ಸುಳ್ಳು ವದಂತಿ ನಂಬಬೇಡಿ ಹಾಗೂ ಹರಡಬೇಡಿ ಎಂದು ಸಾರ್ವಜನಿಕರಿಗೆ ಜಿಲ್ಲಾ ಎಸ್ಪಿ ಮನವಿ ಮಾಡಿದ್ದಾರೆ.
ಕೂರತ್ ಮಸೀದಿಯಲ್ಲಿ ನಡೆಸ ಉರೂಸ್ ಕಾರ್ಯಕ್ರಮಕ್ಕೆ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿರುತ್ತಾರೆ. ಜನದಟ್ಟಣೆಯಲ್ಲಿ 6 ಮಂದಿ ದೈಹಿಕವಾಗಿ ನಿತ್ರಾಣಗೊಂಡಿದ್ದು, ಅವರುಗಳನ್ನು ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಚರಿಸಲಾಗಿ ಇಬ್ಬರ ಆರೋಗ್ಯ ಸ್ಥಳದಲ್ಲೇ ಸುಧಾರಿಸಿದೆ. ಉಳಿದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿರುತ್ತಾರೆ.
ಉರೂಸ್ ಕಾರ್ಯಕ್ರಮವು ಯಾವುದೇ ಅಹಿತಕರ ಘಟನೆಗಳಿಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸಾರ್ವಜನಿಕವಾಗಿ ಯಾವುದೇ ಯಾವುದೇ ಸುಳ್ಳು ವದಂತಿಗಳನ್ನು ಹರಡಬಾರದು. ಸಾರ್ವಜನಿಕರು ಇಂತಹ ಆಧಾರರಹಿತ ಸುದ್ದಿಗಳಿಗೆ ಕಿವಿಗೊಡದೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಬೆಳ್ಳಾರೆ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ವಿನಂತಿಸಿದೆ.