ಲಕ್ನೋ: ಉತ್ತರ ಪ್ರದೇಶದ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದೆ. ಹಜ್ ಯಾತ್ರಿಕರನ್ನು ಕರೆತಂದಿದ್ದ ಸೌದಿ ಏರ್ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಹೊಗೆ ಹೊರಸೂಸಲಾರಂಭಿಸಿದೆ.
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದ ಎಡ ಚಕ್ರದಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದು ಕಂಡುಬಂದಿದೆ. ಶನಿವಾರ ರಾತ್ರಿ 10.40 ಕ್ಕೆ ಜಿದ್ದಾದಿಂದ ಹೊರಟ ವಿಮಾನದಲ್ಲಿ ಈ ಸಮಸ್ಯೆ ಸಂಭವಿಸಿದೆ.
ಫ್ಲೈಟ್ SV 312 ಲ್ಯಾಂಡಿಂಗ್ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣವೇ ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ದಳ (ARFF) ತಂಡವನ್ನು ಕರೆದಿದ್ದು, ಸೌದಿ ತಾಂತ್ರಿಕ ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕೆಲಸ ಮಾಡಿದ ತುರ್ತು ಪ್ರತಿಕ್ರಿಯೆ ತಂಡವು ವಿಮಾನಕ್ಕೆ ಯಾವುದೇ ಹಾನಿಯಾಗುವ ಮೊದಲು ಹೊಗೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಲಾಗಿದೆ. ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ಸೋರಿಕೆಯೇ ಇದಕ್ಕೆ ಕಾರಣ ಎಂದು ನಂಬಲಾಗಿದೆ. ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.