ಅಹ್ಮದಾಬಾದ್: ಕಳೆದ ಗುರುವಾರ ಮಧ್ಯಾಹ್ನ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರು ಸಹಿತ ಮೃತಪಟ್ಟವರ ಸಂಖೈ 274 ಕ್ಕೆ ಏರಿದೆ. ವಿಮಾನವು ಜನನಿಬಿಡ ವಸತಿ ಪ್ರದೇಶದಲ್ಲಿ ಪತನವಾಗಿದ್ದರಿಂದ ವಿಮಾನದ ಪ್ರಯಾಣಿಕರಲ್ಲದ 33 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೂ ಟಾಟಾ ಗ್ರೂಪ್ ಘೋಷಿಸಿದ ಪರಿಹಾರ ದೊರೆಯಲಿದೆ ಎಂದು ಟಾಟಾ ಗ್ರೂಪ್ ತಿಳಿಸಿದೆ.
ಟಾಟಾ ಗ್ರೂಪ್ ಪ್ರಕಾರ, ಮೃತಪಟ್ಟವರಲ್ಲಿ ಸೇರಿರುವ ವಿಮಾನ ಪ್ರಯಾಣಿಕರಲ್ಲದ ಜನರು ಒಂದು ಕೋಟಿ ರೂ. ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಅಪಘಾತದಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಟಾಟಾ ಕಂಪೆನಿ ಭರಿಸುತ್ತದೆ. ಗಾಯಗೊಂಡ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಸಹಾಯ ಸಿಗುವಂತೆ ಟಾಟಾ ಗ್ರೂಪ್ ನೋಡಿಕೊಳ್ಳಲಿದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಟಾಟಾ ಗ್ರೂಪ್ ವಹಿಸಿಕೊಳ್ಳಲಿದೆ.
ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರಲ್ಲಿ ವೈದ್ಯರು, ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಮೇಘನಿನಗರ ಪ್ರದೇಶದ ಸ್ಥಳೀಯ ನಿವಾಸಿಗಳು ಸೇರಿದ್ದಾರೆ ಎನ್ನಲಾಗಿದೆ.
ಡ್ರೀಮ್‌ಲೈನರ್ ಅಪಘಾತದಲ್ಲಿ ಡಿಕ್ಕಿ ಹೊಡೆದು ತೀವ್ರವಾಗಿ ಹಾನಿಗೊಳಗಾದ ಬಿ ಜೆ ಮೆಡಿಕಲ್‌ನ ಹಾಸ್ಟೆಲ್‌ನ ಪುನರ್ನಿರ್ಮಾಣದಲ್ಲಿ ಟಾಟಾ ಕಂಪೆನಿಯು ಸಹಕಾರ ನೀಡಲಿದೆ.
ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಅಪಘಾತದಲ್ಲಿ ಒಬ್ಬರು ಪ್ರಯಾಣಿಕರು ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಉಳಿದ 33 ಸಂತ್ರಸ್ತರು ಅಪಘಾತದ ಸಮಯದಲ್ಲಿ ಅಹಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜಿನ ಆವರಣದಲ್ಲಿದ್ದ ವ್ಯಕ್ತಿಗಳಾಗಿರಬಹುದು ಎನ್ನಲಾಗಿದೆ.
ಹಣಕಾಸಿನ ಪರಿಹಾರವನ್ನು ಹೊರತುಪಡಿಸಿ ಹತ್ತಿರದ ಸಂಬಂಧಿಕರಿಗೆ ಉದ್ಯೋಗ ನೀಡುವಂತಹ ಯೋಜನೆಯ ಬಗ್ಗೆ ಟಾಟಾ ಗ್ರೂಪ್ ಯೋಚಿಸಿದೆಯೇ ಎಂದು ಅಧಿಕಾರಿಗಳನ್ನು ಕೇಳಿದಾಗ, “ಸದ್ಯಕ್ಕೆ ಏನನ್ನೂ ನಿರ್ಧರಿಸಲಾಗಿಲ್ಲ. ನಾವು ಇನ್ನೂ ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದೇವೆ ಮತ್ತು ತನಿಖೆ ಪ್ರಾರಂಭವಾಗಿದೆ” ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಟಾಟಾ ಗ್ರೂಪ್ ಘೋಷಿಸಿದ ಒಂದು ಕೋಟಿ ರೂ.ಗಳ ಹೊರತಾಗಿ, ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರಿಗೆ ವಿಮಾ ಕಂಪನಿಗಳಿಂದ ಸುಮಾರು 1.5 ಕೋಟಿ ರೂ.ಗಳ ಪರಿಹಾರವೂ ಸಿಗಲಿದೆ.