janadhvani

Kannada Online News Paper

ಸೌದಿ ಅರೇಬಿಯಾ: ಬಿಷ ನಕಿಯಾದಲ್ಲಿ ಭಾರತೀಯ ಟ್ಯಾಕ್ಸಿ ಚಾಲಕನ ಗುಂಡಿಕ್ಕಿ ಹತ್ಯೆ

ಅವರು ಐಸಿಎಫ್‌ನ ಕಾರ್ಯಕರ್ತರಾಗಿದ್ದರು.

ರಿಯಾದ್: ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬಿಷ ನಕಿಯಾದಲ್ಲಿ ಮಲಯಾಳಿ ಟ್ಯಾಕ್ಸಿ ಚಾಲಕರೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತರನ್ನು ಕಾಸರಗೋಡು ಏಣಿಯಾಡಿ ನಿವಾಸಿ ಕುಂಬಕ್ಕೋಡ್ ಮಂಝಿಲ್ ಮುಹಮ್ಮದ್ ಬಶೀರ್(42) ಎಂದು ಗುರುತಿಸಲಾಗಿದೆ. ಬಿಶಾದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ರಸ್ತೆಯಲ್ಲಿ ರವಿವಾರ ಮಧ್ಯರಾತ್ರಿಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಆರಂಭದಲ್ಲಿ ಹೌಸ್ ಡ್ರೈವರ್ ವೀಸಾದ ಮೇಲೆ ಸೌದಿಗೆ ಆಗಮಿಸಿದ್ದ ಬಷೀರ್ ಅವರು, ಕಳೆದ 13 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಬಿಶಾ ಪ್ರದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಷೀರ್, ತನ್ನ ನಿವಾಸದ ಬಳಿ ತನ್ನ ಟ್ಯಾಕ್ಸಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.

ಗುಂಡಿನ ದಾಳಿ ಕೇಳಿ ಸುತ್ತಮುತ್ತಲಿನ ಪ್ರದೇಶದ ಜನ ಒಮ್ಮೆಲೇ ಬೆಚ್ಚಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ನೋಡಿದಾಗ ಬಷೀರ್ ಅವರು ಕಾರಿನೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದನ್ನು ಕಂಡ ಈಜಿಪ್ಟ್ ನಾಗರಿಕರೋರ್ವರು ಬಷೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆ ವೇಳೆದಾಗಲೇ ಬಷೀರ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ತಿಳಿದು ಬಂದಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ವಾಹನದಲ್ಲಿ ಬಂದು ಬಷೀರ್ ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಕುರಿತು ಸ್ಥಳೀಯ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.

ಬಷೀ‌ರ್ ಅವರು ಐಸಿಎಫ್‌ನ ಕಾರ್ಯಕರ್ತರಾಗಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳು, ಪೋಷಕರನ್ನು ಅಗಲಿದ್ದಾರೆ. ಮೃತದೇಹವನ್ನು ಕಾಸರಗೋಡಿಗೆ ಕಳುಹಿಸುವ ಕಾರ್ಯ ಪ್ರಗತಿಯಲ್ಲಿದೆ. ಸಾಮಾಜಿಕ ಹೋರಾಟಗಾರರಾದ ಅಬ್ದುಲ್ ಅಝೀಝ್ ಪದಿಪರಂಬನ್ ಮತ್ತು ಮುಜೀಬ್ ಸಖಾಫಿ ಅವರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದಾರೆ.