ನವದೆಹಲಿ| ಭಾರತ-ಪಾಕಿಸ್ತಾನ ಕದನ ವಿರಾಮದಿಂದ ಯುದ್ಧಪ್ರಿಯರು ಸಿಟ್ಟುಗೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪ್ರಧಾನಿ ಮತ್ತು ಇತರರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ.ಅದರಲ್ಲಿ ಬಹುಪಾಲು ಟೀಕಾಕಾರರು ಸಂಘ ಪರಿವಾರದ ಬೆಂಬಲಿಗರಾಗಿದ್ದಾರೆ. ಕದನ ವಿರಾಮ ಘೋಷಣೆಯ ಬಳಿಕ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಅವರ ಕುಟುಂಬವು ಸಂಘಪರಿವಾರ ಬೆಂಬಲಿಗರಿಂದ ತೀವ್ರ ಸೈಬರ್ ದಾಳಿಗೆ ಗುರಿಯಾಗಿದೆ.
ವಿಕ್ರಮ್ ಮಿಶ್ರಿಯವರ ಎಕ್ಸ್ ಖಾತೆಯು ‘ವಂಚಕ’,’ದ್ರೋಹಿ’ಮತ್ತು ‘ದೇಶವನ್ನು ತನ್ನ ಶತ್ರುಗಳಿಗೆ ಮಾರಿದವ’ ಮುಂತಾದ ನಿಂದನಾತ್ಮಕ ಕಾಮೆಂಟಿನಿಂದ ತುಂಬಿದೆ. ಸೈಬರ್ ದಾಳಿಗಳು ತೀವ್ರಗೊಳ್ಳುತ್ತಿದ್ದಂತೆ ಮಿಶ್ರಿ ತಮ್ಮ ಎಕ್ಸ್ ಖಾತೆಯನ್ನು ಮುಚ್ಚಿದ್ದಾರೆ.
ದೇಶವು ಯುದ್ಧವನ್ನು ಬಯಸುವುದಿಲ್ಲ ಎಂದು ಸರ್ಕಾರ ಮತ್ತು ಸೇನಾ ಮುಖ್ಯಸ್ಥರು ಪದೇ ಪದೇ ಹೇಳುತ್ತಿದ್ದರೂ, ಪಾಕಿಸ್ತಾನದೊಂದಿಗೆ ಯುದ್ಧದ ಅವಕಾಶವನ್ನು ತಪ್ಪಿಸಲಾಗಿದೆ ಎನ್ನುವ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಸ್ಟ್‌ಗಳು ಹರಿದಾಡುತ್ತಿದೆ. ಯುದ್ಧಪ್ರಿಯರನ್ನೇ ಗಡಿಗೆ ಕಳಿಸಿಬಿಡಿ ಎಂಬ ಪೋಸ್ಟರ್ ಮೂಲಕ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.
ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಪ್ರತೀಕಾರದಿಂದ ಪಾಕಿಸ್ತಾನ ಬುದ್ಧಿ ಕಲಿಯಲು ವಿಫಲಗೊಂಡ ಕಾರಣ ಎರಡು ದಿನಗಳು ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.
ಭಾರತದ ಪ್ರತೀಕಾರ ಶಕ್ತಗೊಂಡ ಬಳಿಕ ಪಾಕಿಸ್ತಾನ ನಿನ್ನೆ ಕದನ ವಿರಾಮಕ್ಕೆ ಸಿದ್ಧತೆ ನಡೆಸಿತು. ಪಾಕಿಸ್ತಾನದ ಪ್ರಚೋದನೆಯಿಂದಾಗಿ ಗಡಿ ಪ್ರದೇಶಗಳಲ್ಲಿನ ಮನೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿವೆ. ಐವರು ಸೈನಿಕರು ವೀರ ಮೃತ್ಯುವನ್ನಪ್ಪಿದ್ದಾರೆ. ಸರ್ಕಾರಿ ಅಧಿಕಾರಿ ಸೇರಿದಂತೆ ಅನೇಕ ನಾಗರಿಕರು ಮೃತಪಟ್ಟಿದ್ದಾರೆ. ಪಾಕಿಸ್ತಾನದಿಂದ ಮತ್ತೆ ಪ್ರಚೋದನೆ ಉಂಟಾದರೆ ಕಠಿಣ ಪ್ರತಿದಾಳಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಸೇನಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.