ಮಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ಸರ್ಕಾರವು ನೀರಿನ ಸಮಸ್ಯೆ ನಿವಾರಣೆಗಾಗಿ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುತ್ತದೆ. ಆದರೆ, ನಗರದ ಹೊರವಲಯದ ಕೃಷ್ಣಾಪುರದಲ್ಲಿ ಸುಮಾರು ದಿನಗಳಿಂದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಪಂಚಾಯಿತಿ ಅಧೀನದಲ್ಲಿ ಆಯಾ ವಾರ್ಡ್ ಮೆಂಬರ್ ಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಾದರೆ, ಆಯಾ ಏರಿಯಾದ ಕಾರ್ಪೋರೇಟರ್ ಗಳು ಸೂಕ್ತ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಆದರೆ, ಕೃಷ್ಣಾಪುರ ಪ್ರದೇಶದಲ್ಲಿ ಇದೇ ಮೊದಲಬಾರಿಗೆ ಕಾರ್ಪೊರೇಷನ್ ನೀರು ಸರಬರಾಜನ್ನು ಸ್ಥಗಿತ ಗೊಳಿಸಿ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬಗ್ಗೆ ಕಾರ್ಪೊರೇಟರ್ ಆಗಲಿ, ಬೇರೆ ಯಾರೇ ಚುನಾಯಿತ ವ್ಯಕ್ತಿಯಾಗಲಿ ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ಭಾರಿ ಹಣ ತೆತ್ತು ಟ್ಯಾಂಕರ್ ನೀರನ್ನು ಖರೀದಿಸಿ, ಅಲ್ಪ ಮಟ್ಟಿನ ಪರಿಹಾರ ಕಂಡುಕೊಳ್ಳುತ್ತಾರೆ,ಆದರೆ, ಬಡವರ ಜೀವನ ನೀರಿಲ್ಲದೆ ಬಲು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಸೂಕ್ತ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.