ರಿಯಾದ್: ಸೌದಿ ಅರೇಬಿಯಾಕ್ಕೆ ಬಿಸಿನೆಸ್, ಟೂರಿಸ್ಟ್ ಮತ್ತು ವಿಸಿಟ್ ವೀಸಾದ ಮೇಲೆ ಆಗಮಿಸಿದವರೆಲ್ಲರೂ ಏಪ್ರಿಲ್ 13ರ ಮುಂಚಿತವಾಗಿ ಸ್ವದೇಶಕ್ಕೆ ಹಿಂತಿರುಗಬೇಕು ಎಂಬ ಸುದ್ದಿ ಸತ್ಯಕ್ಕೆ ದೂರ ಎಂದು ಸೌದಿ ಪಾಸ್‌ಪೋರ್ಟ್ ಇಲಾಖೆ ಹೇಳಿದೆ.
ಭಾರತ ಸೇರಿ 14 ದೇಶಗಳಿಂದ ಸೌದಿಗೆ ಆಗಮಿಸಿದವರೆಲ್ಲರೂ ಏಪ್ರಿಲ್ 13 ರ ಮುಂಚಿತವಾಗಿ ವಾಪಸ್ ಹೋಗಬೇಕು, ಇಲ್ಲದಿದ್ದಲ್ಲಿ ಐದು ವರ್ಷಗಳ ಕಾಲ ಪ್ರವೇಶ ನಿಷೇಧ ಹೇರಲಾಗುವುದು ಎಂದು ಟ್ರಾವೆಲ್ ಕಂಪನಿಗಳ ಹೆಸರಿನಲ್ಲಿ ಸುತ್ತೋಲೆಯೊಂದು ಹರಿದಾಡುತ್ತಿತ್ತು. ಇದರ ಬಗ್ಗೆ ಸೌದಿ ವಿದೇಶಾಂಗ ಮತ್ತು ಆಂತರಿಕ ಸಚಿವಾಲಯದ ವೇದಿಕೆಯಲ್ಲಿ ವಿದೇಶಿಗರು ವಿಚಾರಿಸಿದಾಗ, ಇದು ಸುಳ್ಳು ಸುದ್ದಿ ಎಂದು ಜವಾಝಾತ್ ಅಥವಾ ಪಾಸ್‌ಪೋರ್ಟ್ ವಿಭಾಗ ಉತ್ತರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ನಂಬಬೇಡಿ ಎಂದು ಜವಾಝಾತ್ ನಿರ್ದೇಶನಾಲಯ ಸ್ಪಷ್ಟಪಡಿಸಿದೆ. ಯಾವುದೇ ಹೊಸ ಸೂಚನೆಗಳಿದ್ದಲ್ಲಿ, ಅದನ್ನು ಜವಾಝಾತ್‌ನ ಅಧಿಕೃತ ಚಾನೆಲ್‌ಗಳ ಮೂಲಕ ತಿಳಿಸಲಾಗುವುದು ಎಂದು ಜವಾಝಾತ್ ತಿಳಿಸಿದೆ. ಕಳೆದ ತಿಂಗಳಿನಿಂದ, ಭಾರತೀಯರು ಸೇರಿದಂತೆ ಹಲವು ದೇಶದವರಿಗೆ ಸೌದಿ ವೀಸಾ ನಿರ್ಬಂಧವಿದೆ. ಇದು ಹಜ್ ಗೆ ಮುನ್ನುಡಿ ಎಂದು ನಂಬಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಅಧಿಸೂಚನೆ ಬಂದಿಲ್ಲ. ಪ್ರಸ್ತುತ ನೀಡಲಾದ ಕೆಲವು ವೀಸಾಗಳಲ್ಲಿ ಏಪ್ರಿಲ್ 13 ಅನ್ನು ಕೊನೆಯ ದಿನಾಂಕವೆಂದು ತೋರಿಸಲಾಗಿದ್ದು, ಹರಿದಾಡುತ್ತಿರುವ ಸುದ್ದಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹೀಗೆ ವೀಸಾ ಪಡೆದವರು ಸೌದಿಗೆ ಕರೆತಂದವರ ಅಬ್ಶೀರ್ ಮುಖಾಂತರ ವೀಸಾ ಸಿಂಧುತ್ವವನ್ನು ಖಚಿತಪಡಿಸಿಕೊಂಡು ಆ ದಿನಾಂಕದೊಳಗೆ ಹಿಂತಿರುಗಬೇಕು. ವೀಸಾ ಅವಧಿ ಮುಗಿದಿರುವವರು ಅಬ್ಶೀರ್ ಮೂಲಕ ವೀಸಾಗಳನ್ನು ನವೀಕರಿಸಬಹುದಾದರೆ ಸೌದಿಯಲ್ಲಿ ಉಳಿಯಬಹುದು. ಇದು ವ್ಯಾಪಾರ ವೀಸಾಗಳಿಗೂ ಅನ್ವಯಿಸುತ್ತದೆ.
ಇವೆಲ್ಲವೂ ಮೊದಲೇ ಅಸ್ತಿತ್ವದಲ್ಲಿರುವ ಕಾನೂನುಗಳಾಗಿವೆ. ಬಹು ಪ್ರವೇಶ ಪ್ರವಾಸಿ ವೀಸಾ ಹೊಂದಿರುವವರು ಸೌದಿ ಅರೇಬಿಯಾದಲ್ಲಿ ವರ್ಷದಲ್ಲಿ ಒಟ್ಟು 90 ದಿನಗಳ ಕಾಲ ಮಾತ್ರ ಉಳಿಯಲು ಅನುಮತಿಸಲಾಗಿದೆ. ಭಾರತೀಯರು ಸೇರಿದಂತೆ ಈಗಿರುವ ಭೇಟಿ ವೀಸಾ ನಿರ್ಬಂಧಗಳು ಹಜ್ ನಂತರ ಕೊನೆಗೊಳ್ಳುವ ನಿರೀಕ್ಷೆಯಿದೆ. ಸಂಪೂರ್ಣ ನಿಷೇಧವಿದ್ದರೆ, ಸೌದಿ ವಿದೇಶಾಂಗ ಸಚಿವಾಲಯವು ಸಾಮಾನ್ಯ ಕಾರ್ಯವಿಧಾನದ ಪ್ರಕಾರ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಅದರ ಬಗ್ಗೆ ಮಾಹಿತಿ ನೀಡಲಿದೆ. ರಾಯಭಾರ ಕಚೇರಿಯಾಗಲಿ ಅಥವಾ ಕಾನ್ಸುಲೇಟ್ ಆಗಲಿ ಅಂತಹ ಯಾವುದೇ ಸೂಚನೆಯನ್ನು ಸ್ವೀಕರಿಸಿರುವ ಬಗ್ಗೆ ವರದಿ ಮಾಡಿಲ್ಲ. ಹಾಗಾಗಿ ಹಜ್ ಯಾತ್ರೆಯ ನಂತರ ಎಂದಿನಂತೆ ವೀಸಾ ಲಭ್ಯವಾಗಲಿದೆ ಎಂದು ಆಶಿಸಲಾಗಿದೆ.