janadhvani

Kannada Online News Paper

ಭಾರತೀಯರಿಗೆ ಹಜ್ ನಿಷೇಧ? – ಸುಳ್ಳು ಸುದ್ದಿ ಪ್ರಕಟಿಸಿ ವಿಕೃತ ಆನಂದಿಸುತ್ತಿರುವ ಪೀತ ಪತ್ರಿಕೆಗಳು

14 ದೇಶಗಳಿಗೆ ತಾತ್ಕಾಲಿಕವಾಗಿ ಉಮ್ರಾ, ವಿಸಿಟ್ ವೀಸಾ ನಿಷೇಧವನ್ನು ಹೇರಲಾಗಿದೆ.

ರಿಯಾದ್: ಸೌದಿ ಅರೇಬಿಯಾ ಹಜ್ ಯಾತ್ರೆಗೆ ಮುಂಚಿತವಾಗಿ ಪ್ರತೀ ವರ್ಷದಂತೆ ವ್ಯಾಪಾರ ಮತ್ತು ಕೌಟುಂಬಿಕ ಸಂದರ್ಶಕ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಜ್ ಯಾತ್ರೆ ಹಿನ್ನೆಲೆ ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆದರೆ ಈ ವರದಿಯ ಸತ್ಯಾಂಶವನ್ನು ತಿಳಿಯದ ಅಥವಾ ತಿಳಿದೂ ತಿಳಿಯದವರಂತೆ ನಟಿಸಿ, ಹೇಗಾದರೂ ಮುಸ್ಲಿಮರ ಮನ ನೋಯಿಸಬೇಕೆಂಬ ಪಣ ತೊಟ್ಟಿರುವ ಕೆಲವು ಮತಾಂಧ ಪತ್ರಿಕೆಗಳು ‘ಭಾರತೀಯ ಮುಸ್ಲಿಮರಿಗೆ ಹಜ್ ಯಾತ್ರೆ ನಿಷೇಧಿಸಿದ ಸೌದಿ ಅರೇಬಿಯಾ’ ಎಂಬ ತಲೆಬರಹವನ್ನು ನೀಡಿ ವಿಕೃತ ಆನಂದಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರ ವರದಿಯನ್ನು ಮುಸಲ್ಮಾನರು ಮೂಸಿಯೂ ನೋಡುವುದಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಲೆ ಬರಹವನ್ನು ನೋಡಿ ಸಂದೇಹಕ್ಕೆ ಒಳಗಾಗುವುದರಲ್ಲಿ ಸಂಶಯವಿಲ್ಲ.

ಸೌದಿ ಅರೇಬಿಯಾದಲ್ಲಿ ಹಜ್ ಋತುವಿನ ಸಮಯದಲ್ಲಿ ಸಂದರ್ಶಕ ವೀಸಾ ನಿಯಂತ್ರಣ ಏರ್ಪಡಿಸುತ್ತಿರುವುದು ವಾಡಿಕೆಯಾಗಿದೆ. ಇದರ ಪ್ರಕಾರ ಹಜ್ ಯಾತ್ರೆಯು ಮುಕ್ತಾಯಗೊಳ್ಳುವವರೆಗೆ ಅಂದರೆ ಜೂನ್ ಮಧ್ಯದವರೆಗೆ ಉಮ್ರಾ, ವಿಸಿಟ್ ವೀಸಾ ನಿಷೇಧವು ಜಾರಿಯಲ್ಲಿರಲಿದೆ. ನೋಂದಣಿ ಇಲ್ಲದ ವ್ಯಕ್ತಿಗಳು ಹಜ್ ನಿರ್ವಹಿಸಲು ಪ್ರಯತ್ನಿಸುವುದನ್ನು ತಡೆಯಲು, ಜನಸಂದಣಿಯನ್ನು ನಿಯಂತ್ರಿಸಲು, ಹಜ್ ವೇಳೆ ಕಾಲ್ತುಳಿತದಂತಹ ಘಟನೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗುತ್ತದೆ.

ಈ ವೇಳೆಯಲ್ಲಿ ಹಜ್ ಯಾತ್ರಿಕರಿಗಾಗಿ ವಿಶೇಷ ಹಜ್ ವೀಸಾವನ್ನು ನೀಡಲಾಗುತ್ತದೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ವರ್ಷ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 13. 2025 ಕೊನೆಯ ದಿನವಾಗಿದೆ. ಆ ಬಳಿಕ ಹಜ್ ಮುಕ್ತಾಯದವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ.

ಮುಸ್ಲಿಮ್ ಬಾಹುಳ್ಯ ದೇಶಗಳಾದ ಭಾರತ, ಬಾಂಗ್ಲಾದೇಶ. ಪಾಕಿಸ್ತಾನ, ಈಜಿಪ್ಟ್ ಇಂಡೋನೇಷ್ಯಾ ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ಮೊದಲಾದ 14 ದೇಶಗಳಿಗೆ ತಾತ್ಕಾಲಿಕವಾಗಿ ಉಮ್ರಾ, ವಿಸಿಟ್ ವೀಸಾ ನಿಷೇಧವನ್ನು ಹೇರಲಾಗಿದೆ. ಈ ದೇಶದವರು ಆಯಾ ದೇಶಕ್ಕೆ ನೀಡಲಾದ ಹಜ್ ಕೋಟಾದಡಿ ಹಜ್ ಯಾತ್ರೆ ಕೈಗೊಳ್ಳಲು ಯಾವುದೇ ನಿಷೇಧವಿಲ್ಲ.

ಇತರ ವೀಸಾ ಮೂಲಕ ಆಗಮಿಸಿ, ಹಜ್ ಸಮಯದಲ್ಲಿ ಸೌದಿಯಲ್ಲಿ ಅಕ್ರಮವಾಗಿ ವಾಸವಿದ್ದರೆ ಅಂತಹ ವ್ಯಕ್ತಿಗಳಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ಐದು ವರ್ಷಗಳ ನಿಷೇಧ ಮತ್ತು SAR 10.000 ರೂ (2.28.547ರೂ.) ದಂಡವನ್ನು ವಿಧಿಸಲಾಗುತ್ತದೆ ಎಂದು Gulf News ವರದಿ ಮಾಡಿದೆ.