✍️ರಾಫಿ ನಗರ
ಲೋಕಸಭೆ ಹಾಗೂ ರಾಜ್ಯಸಭೆಯ ಬಹುಪಾಲು ವಕ್ಫ್ ತಿದ್ದುಪಡಿ ಸಂಬಂಧಿಸಿದ ಕಲಾಪಗಳು ,ಚರ್ಚೆಗಳು ವೀಕ್ಷಿಸಿದ್ದರಿಂದ ಸ್ಪಷ್ಟವಾಗಿ ಹೇಳಬಲ್ಲೆ, ಇದು ಬಿಜೆಪಿಗೆ ಸಂಬಂಧಿಸಿದಂತೆ ಸೋಲಾಗಿದೆ. ಯಾಕೆ ನಾವು ವಕ್ಫ್ ಮುಟ್ಟಿ ಸ್ವಂತ ಮುಖಕ್ಕೆ ಮಸಿ ಬಳಿದೆವೋ ಎಂದು ಚಿಂತಿಸುವಷ್ಟು ಕಪಾಲ ಮೋಕ್ಷ ಬಿಜೆಪಿ ಈ ಎರಡು ದಿನಗಳಲ್ಲಿ ಅನುಭವಿಸಿದೆ. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ತನ್ನ ನಂಬಿದವರಿಗೆ ಅವರು ಇತಿಹಾಸದಲ್ಲಿ ನೀಡಿದ ದೊಡ್ಡ ಮಾನಸಿಕ , ಮತ್ತು ರಾಜಕೀಯ ಸ್ಥೈರ್ಯ ಮತ್ತು ನಂಬಿಕೆಯಾಗಿ ಈ ಕಲಾಪಗಳು ದಾಖಲಿಸಲ್ಪಡುತ್ತದೆ.
ಈ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತನಾಡದಿರುವುದು ಸ್ವಲ್ಪ ಗೊಂದಲವಾಗಿ ಕಂಡರೂ ,ಬಿಜೆಪಿಯ ಆಶಯ ದಾರಿದ್ಯದಲ್ಲಿ ಅವರು ಮಾಡುವ ರಾಜಕೀಯಕ್ಕೆ , ರಾಹುಲ್ ಗಾಂಧಿಯ ಮತ್ತು ಪಕ್ಷದ ತಂತ್ರಗಾರಿಕೆಯಾಗಿಯೂ ಇದನ್ನು ಒಪ್ಪಿಕೊಳ್ಳಬಹುದು. ಮತ್ತು ಪ್ರಿಯಾಂಕ ಗಾಂಧಿಯ ಗೈರು ಹಾಜರಿಯನ್ನೂ ಕ್ಷಮಿಸಬಹುದು. ಕಾರಣ ಅವರು ತಮ್ಮ ಪಕ್ಷವನ್ನು ನೂರು ಶೇಕಡಾ ಪ್ರಾಮಾಣಿಕ ಧ್ವನಿಯಾಗಿ ಕಲಾಪದಲ್ಲಿ ತೊಡಗಿಸಿಕೊಂಡಿದ್ದರು ಎಂಬುವುದು ಸ್ಪಷ್ಟವಾಗಿತ್ತು.
ಇಂಡಿಯಾ ಒಕ್ಕೂಟದ ಪ್ರತಿಯೊಬ್ಬ ಸದಸ್ಯರು ಪ್ರಾಮಾಣಿಕವಾಗಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಅಧ್ಯಯನ ಮಾಡಿ ಕಲಾಪಕ್ಕೆ ಹಾಜರಾಗಿದ್ದರು ಎಂಬುದು ಅವರೆಲ್ಲರ ವಿಷಯ ಸಂಪನ್ನತೆ ನೋಡಿ ಅರ್ಥೈಸಬಹುದಿತ್ತು. ಬಿಜೆಪಿಯು ಇತಿಹಾಸದಲ್ಲಿ ಮುಂದೆ ಕಾನೂನು ತರಲು ಚಿಂತಿಸುವಾಗ ನೂರು ಬಾರಿ ಯೋಚಿಸಲಿದೆ ಎಂಬುದು ಈ ಬೆಳವಣಿಗೆಯಿಂದ ನಾನು ಕಂಡುಕೊಂಡ ಸತ್ಯ. ಕಾನೂನುಗಳನ್ನು ಬೇಕಾದಂತೆ ಪಾಸ್ ಮಾಡುವ ಇದುವರೆಗಿನ ಬಿಜೆಪಿಯ ರೀತಿ-ನೀತಿಗೆ ನೀಡಿದ ಪ್ರಹಾರವಾಗಿತ್ತು ಕಾಂಗ್ರೆಸ್ ಮಾಡಿದ ವ್ಯವಸ್ಥಿತವಾದ ಹೋರಾಟ. ಲೋಕಸಭೆಯಲ್ಲಿ ಆಗಲಿ , ರಾಜ್ಯ ಸಭೆಯಲ್ಲಾಗಲಿ ಬಿಜೆಪಿ ಒಕ್ಕೂಟಕ್ಕೆ ಪ್ರಖರವಾದ ತಿದ್ದುಪಡಿ ಕಾಯ್ದೆ ಮೇಲಿನ ಸಮರ್ಥನೆ ಮಾಡಲು ಸಾಧ್ಯವಾಗಲೇ ಇಲ್ಲ. ಮತ್ತೆ ಸಂಖ್ಯಾಬಲದ ಗೆಲುವು ಅದು ಚರ್ಚೆ ನಡೆಸಿದರೂ ,ನಡೆಸದಿದ್ದರೂ ಬಿಜೆಪಿ ಪರವೆಂದು ಅದು ಮತ ಹಾಕಿದ ಮೇಲೆ ತಿಳಿದ ಸತ್ಯವಲ್ಲ. ಎಲ್ಲರಿಗೂ ಮೊದಲೇ ಗೊತ್ತಿರುವ ಸತ್ಯ. ಆದರೆ ಈ ಸತ್ಯಗಳಾಚೆ ಬಿಜೆಪಿಯ ರಾಜಕೀಯ ದಾರಿದ್ರ್ಯವನ್ನೂ , ಅವರ ಸೈದ್ಧಾಂತಿಕ ಸೋಲನ್ನೂ ಜಾಗತಿಕವಾಗಿ ಕೋಟ್ಯಾಂತರ ಜನರ ಮುಂದೆ ಬೆತ್ತಲೆಯಾಗಿಸುವಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಯಶಸ್ವಿಯಾಗಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ, ಮತ್ತು ಅದರಿಂದ ದೇಶಕ್ಕಾಗಲಿ , ಯಾವುದೇ ಸಮಾಜಕ್ಕಾಗಲಿ ಯಾವುದೇ ಉಪಕಾರ ವಿಲ್ಲ, ಬರೀ ಡೊಳ್ಳು ಹವಾ ತುಂಬಿದ ಬಲೂನ್ ಪ್ರತೀತಿ ಅಷ್ಟೆ. ಕೋಮು ವಿಷಬೀಜ ಬಿತ್ತಿ ಸಮುದಾಯಗಳನ್ನು ಎತ್ತಿ ಕಟ್ಟಿ ಮತ ಪಡೆಯುವ ರಾಜಕೀಯ ದಾರಿದ್ರ್ಯ ಬಿಜೆಪಿಯದ್ದು ಎಂಬುದು ಸಂಸತ್ತು ಸ್ಪಷ್ಟವಾಗಿ ಜನರಿಗೆ ಮನವರಿಕೆಯಾಗುವ ರೀತಿ ಚರ್ಚೆ ನಡೆದಿದೆ.
ಚರ್ಚೆಯಲ್ಲಿ ಮಾತನಾಡುತ್ತಾ ಕಪಿಲ್ ಸಿಬಲ್ , ವಕ್ಫ್ ಸಂಪತ್ತು ಇಲ್ಲಿ ಮುಸ್ಲಿಮರು ಏನೋ ದೊಡ್ಡ ಮಟ್ಟದಲ್ಲಿ ಜಾಗದ ಒಡೆಯರು ಎಂಬ ಕಪೋಲಕಲ್ಪಿತ ವಾದಕ್ಕೆ , ಕೇವಲ 4ರಾಜ್ಯಗಳ ಹಿಂದು ಮುಜುರಾಯಿಯ ಸ್ವತ್ತು ವಕ್ಫ್ ಸಂಪತ್ತಿಗಿಂತ 2ಲಕ್ಷ ಎಕರೆ ಹೆಚ್ಚಿದೆ ಅಂತ ಮಾಹಿತಿ ನೀಡಿದರು. ಕೇವಲ ವಕ್ಫ್ ಟ್ರಿಬ್ಯೂನಲ್ ಮಾತ್ರವಲ್ಲ ಈ ದೇಶದಲ್ಲಿ ಇರುವುದು , ಹಿಂದೂ ಆಕ್ಟ್ ಮತ್ತು ಅದರ ಲೋಪದೋಷಗಳು, ಅದರ ಟ್ರಿಬ್ಯೂನಲ್ ಸಹಿತ ಹತ್ತಕ್ಕೂ ಮಿಕ್ಕ ಟ್ರಿಬ್ಯೂನಲ್ ಮತ್ತು ಪ್ರತ್ಯೇಕ ಧರ್ಮಗಳ. ಇಲಾಖೆ ಮತ್ತು ವ್ಯವಸ್ಥೆಗಳು ಇದೆ. ಇದರಲ್ಲಿ ಹಿಂದೂ ಮಹಿಳೆಯರಿಗೆ ಇರುವ ಅನ್ಯಾಯ ಬೊಟ್ಟು ಮಾಡುತ್ತಾ ಅವರಿಗೆ ಯಾವಾಗ ನ್ಯಾಯಕ್ಕಾಗಿ ತಿದ್ದುಪಡಿ ಮಾಡುತ್ತೀರಿ ಅಂತ ಸ್ಪಷ್ಟವಾಗಿ ಕೇಳಿದಾಗ ಸಂಸತ್ತು ಮೌನವಾಗಿ ಬಿಟ್ಟಿತು. ವಕ್ಫ್ ಸಂಪತ್ತು ಸಂರಕ್ಷಣೆಗೆ ಈ ಮೊದಲು ಕಠಿಣ ಕಾನೂನು ಇದ್ದರೆ, ಅವೆಲ್ಲವನ್ನೂ ದುರ್ಬಲ ಗೊಳಿಸಿ , ಆಕ್ರಮಿಸಿಕೊಂಡವರ ಪರವಾದ ತಿದ್ದುಪಡಿ ಕಾಯ್ದೆ, ಈ ಚರ್ಚೆಯು ಬಿಜೆಪಿಯ ದಿವಾಳಿತನದ ದಾಖಲೆಗಳು ಸಂಸತ್ತಿನಲ್ಲಿ ದಾಖಲೆಗಳಲ್ಲಿ ಕಾಲಕಾಲಕ್ಕೆ ಇರಲಿದೆ. 5 ವರ್ಷ ಪ್ರಾಕ್ಟಿಸಿಂಗ್ ಮುಸ್ಲಿಂ ಆಗಿದ್ದವರು ಮಾತ್ರ ವಕ್ಫ್ ದಾನ ಮಾಡಬಹುದು ಎಂಬುದರ ಕುರಿತಾಗಿ ಹಲವು ಸ್ವಾರಸ್ಯಕರ ಚರ್ಚೆ ನಡೆಯಿತು. ನಿಜವಾಗಿ ಈ ಎಲ್ಲಾ ಚರ್ಚೆಗಳು ಬಿಜೆಪಿಯನ್ನು ಅಪಹಾಸ್ಯ ಮಾಡಿದೆ. ಬಾಬರೀ ಮಸ್ಜಿದ್ ತೀರ್ಪು ಕೂಡಾ ಚರ್ಚೆಗೆ ಬಂತು. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ಬಿಂಬಿಸುವ ಈ ಪ್ರಯತ್ನದ ಅಂಶಗಳನ್ನು ಸ್ಪಷ್ಟವಾಗಿ ವಿರೋಧ ಪಕ್ಷ ಸ್ಪಷ್ಟಪಡಿಸಿತು.
ಈ ಎಲ್ಲಾ ಗೊಂದಲಗಳಿಂದ ಮಂಕಾದ ಬಿಜೆಪಿ , 2ದಿನಗಳ ಕಲಾಪದಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಕರುಣೆ ಮತ್ತು ಪ್ರಗತಿಯ ಅಭಿವೃದ್ಧಿಗಾಗಿ ಬಿಜೆಪಿ ಇರುವುದು, ನಾವು ಮುಸ್ಲಿಮರ ಅಭಿವೃದ್ಧಿಯ ಹರಿಕಾರರು ಎಂಬುದಾಗಿ ನಿರಂತರ ಗೃಹ ಸಚಿವರು ಸಹಿತ ಮಾತನಾಡ ಬೇಕಾಯಿತು. ಈ ಮಾತುಗಳು ಹಿಂದುತ್ವ ವಾದಿಗಳು ಕೇಳಿಕೊಂಡರೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಬಿಜೆಪಿ ಬೆತ್ತಲಾಗಿದೆ.
ಇವೆಲ್ಲಕ್ಕೂ ಮುಖ್ಯವಾಗಿ ಸ್ಪೀಕರ್ ಗಳಿಗೆ ಇಂಡಿಯಾ ಒಕ್ಕೂಟ ಮಾನಸಿಕ ಹಿಂಸೆ ರೀತಿ ಕೆಲಸ ಕೊಟ್ಟಿದೆ. ಪ್ರತಿಯೊಂದು ಪ್ರಮುಖ ತಿದ್ದುಪಡಿಯನ್ನು ಮತಕ್ಕೆ ಆಗ್ರಹಿಸಿದ್ದು , ಈ ರೀತಿ ಎರಡು ದಿನಗಳು 26ಗಂಟೆಗಳು ಅವರಿಗೆ ಮಾನಸಿಕ ಕಿರುಕುಳವಾಗುವಂತೆ ಚರ್ಚೆಗೆ ಕೈಗೆತ್ತಿಕೊಂಡಿದ್ದು , ಮತ್ತು ವ್ಯವಸ್ಥಿತವಾಗಿ ಯೋಜನೆಗಳು ಹಮ್ಮಿಕೊಂಡಿದ್ದು ಸ್ಪಷ್ಟವಾಗಿತ್ತು. ಹೊಸ ಕಾನೂನು ತರುವುದು ,ಇಂಡಿಯಾ ಒಕ್ಕೂಟ ಚರ್ಚೆಯಿಂದ ಹೊರಗೆ ಬಂದು ಬಹಿಷ್ಕಾರ ಹಾಕುವುದು , ಅವರು ಬಿಲ್ ಪಾಸ್ ಮಾಡಿ ಸಂಭ್ರಮಿಸುವುದು ಇದುವರೆಗಿನ ಬೆಳವಣಿಗೆಯಾದರೆ. ಈ ಬಿಲ್ ಪಾಸ್ ಮಾಡಿದ ಎನ್ ಡಿ ಎ ಒಕ್ಕೂಟದ ಮತದಾರರಲ್ಲಿ ಖಂಡಿತ ವಿಶೇಷ ಸಂತೋಷ , ಸಂಭ್ರಮ ಸಡಗರ ಕಾಣಲು ಸಾಧ್ಯವೇ ಇಲ್ಲ. ಈ ಬಿಲ್ ಪಾಸ್ ಮಾಡಿಯೂ ಸ್ಮಶಾನ ಮೌನವಾಗಿದೆ ಈಗ ಬಿಜೆಪಿಯಲ್ಲಿ ಬಾಕಿ ಯಾಗುವುದು.
ಈ ಎಲ್ಲಾ ಚರ್ಚೆಗಳಿಂದ ಸ್ಪಷ್ಟವಾಗುವುದು , ಈ ಕಾನೂನು ದೇಶದಲ್ಲಿ ದೊಡ್ಡ ಸಮಯದವರೆಗೆ ಏನೂ ಬಾಕಿಯಾಗುವುದಿಲ್ಲ, ಇವತ್ತು ಧಾರ್ಮಿಕವಾಗಿ , ಸೈದ್ಧಾಂತಿಕವಾಗಿ ಈ ಕಾನೂನು ಸೋತು ಆಗಿದೆ. ಕೇವಲ ಸಂಖ್ಯಾಬಲ ಮಾತ್ರ ಗೆದ್ದಿರುವುದು. ಆ ಸಂಖ್ಯಾ ಬಲ ಶಾಸ್ವತ ಆಗಿರುವುದಿಲ್ಲ. ಆದ್ದರಿಂದ ಈ ಗೆಲುವು ಇಂಡಿಯಾ ಒಕ್ಕೂಟ ದ್ದು, ಭಾರತೀಯರದ್ದು.
ಜೈ ಹಿಂದ್