ಬೆಂಗಳೂರು: ದೂತ ಸಮೀರ್ ಎಂಡಿ ಎಂಬ ಯೂಟ್ಯೂಬರ್ ತಮ್ಮ ಚಾನೆಲ್‌ನಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತು ಸವಿವರವಾಗಿ ವಿಡಿಯೋ ಮಾಡಿದ್ದು, ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ. ಈ ವೀಡಿಯೋ ಇದೀಗ 14 ಮಿಲಿಯನ್ ವ್ಯೂವ್ಸ್ ಪಡೆದು ವೈರಲ್ ಆಗಿದೆ.
ವೀಕ್ಷಕರೆಲ್ಲರೂ ಸಮೀರ್ ಗೆ ಮೆಚ್ಚುಗೆಯನ್ನು, ಬೆಂಬಲವನ್ನೂ ವ್ಯಕ್ತಪಡಿಸಿದ್ದಾರಲ್ಲದೇ, ಧೈರ್ಯವನ್ನು ತುಂಬಿದ್ದಾರೆ. ವೀಡಿಯೋ ವ್ಯಾಪಕ ಪ್ರಚಾರಗೊಳ್ಳುತ್ತಿದ್ದಂತೆ ಪೊಲೀಸರು ಆಗಮಿಸಿ ಸಮೀರ್ ಬಂಧನಕ್ಕೆ ಮುಂದಾಗಿದ್ದು, ನಂತರ ವಿಚಾರಣೆಗೆ ಸಹಕರಿಸುವುದಾಗಿ ಭರವಸೆ ನೀಡಿದ ಮೇಲೆ ಪೋಲೀಸರು ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಫೇಸ್ ಬುಕ್ ಲೈವ್‌ನಲ್ಲಿ ಸಮೀರ್ ಹೇಳಿದ್ದರು. ಅನಂತರ ಗಿರೀಶ್ ಮಟ್ಟಣ್ಣನವರ್ ಅವರ ವಕೀಲರ ತಂಡ ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಾನೂನು ಉಲ್ಲಂಘಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಾಗಾಗಿ ಈ ಮೂಲಕ ಸಮೀರ್ ಗೆ ಬಿಗ್ ರಿಲೀಫ್ ದೊರಕಿದಂತಾಗಿದೆ. ಅರೆಸ್ಟ್ ಮಾಡುವ ಹಾಗಿಲ್ಲ, ಪೊಲೀಸ್ ಠಾಣೆಗೂ ಕರೆಯುವ ಹಾಗಿಲ್ಲ ಎಂದು ಕೋರ್ಟ್ ಹೇಳಿದೆ ಎಂದು ಗಿರೀಶ್ ಮಟ್ಟಣನವರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.