ಕಾಸರಗೋಡು: ಮಂಜೇಶ್ವರ ವಾಮಂಜೂರಿನಲ್ಲಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರದ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ 9:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರೆಂದು ವರದಿಯಾಗಿದೆ. ಕಾಸರಗೋಡು ಪೈವಳಿಕೆ ಬಾಯಿಕಟ್ಟ ಮೂಲದ ಜನಾರ್ದನ, ಅವರ ಪುತ್ರ ವರುಣ್ ಮತ್ತು ಸೋದರ ಸಂಬಂಧಿ ಮಂಗಳೂರಿನ ಕಿಶನ್ ಮೃತಪಟ್ಟಿದ್ದಾರೆ. ಅವರ ಸಂಬಂಧಿ ಉಪ್ಪಿನಂಗಡಿ ಮೂಲದ ರತನ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮಂಗಲ್ಪಾಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ನಿಯಂತ್ರಣ ತಪ್ಪಿದ ಕಾರು ಸೇತುವೆಯ ಗಾರ್ಡ್ ರೈಲ್ ಮತ್ತು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಬಿಡಿಭಾಗಗಳು ರಸ್ತೆಯಲ್ಲಿ ಹರಡಿಕೊಂಡಿದೆ. ಡಿಕ್ಕಿಯ ರಭಸಕ್ಕೆ ಸಾವನ್ನಪ್ಪಿರುವ ಮೂವರು ಕಾರಿನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರು. ಕಿಶನ್‌ನನ್ನು ಮಂಗಳೂರಿಗೆ ತಲುಪಿಸಲು ಮನೆಯವರು ತೆರಳಿದ್ದರು ಎನ್ನಲಾಗಿದೆ.
ಚಾಲಕ ನಿದ್ರೆಗೆ ಜಾರಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಡಿವೈಡರ್ ಅಳವಡಿಕೆಯಲ್ಲಿ ಲೋಪ ಎಸಗಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.