ಜಿದ್ದಾ: ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸೋಮವಾರದವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ನಾಗರಿಕ ರಕ್ಷಣಾ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ ಮೂರು ದಿನಗಳ ಕಾಲ ಸೌದಿ ಅರೇಬಿಯಾದ ವಿವಿಧೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ಮಕ್ಕಾ ಪ್ರಾಂತ್ಯದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ ಲಿತ್ ಮತ್ತು ಖುನ್‌ಫುದಾ ಗವರ್ನರೇಟ್‌ಗಳಲ್ಲೂ ಮಳೆಯ ಎಚ್ಚರಿಕೆ ನೀಡಲಾಗಿದೆ. ರಿಯಾದ್ ಪ್ರದೇಶದ ವಿವಿಧ ಭಾಗಗಳಲ್ಲಿ ಮಳೆ ಮತ್ತು ಧೂಳಿನ ಗಾಳಿಯ ಸಾಧ್ಯತೆಯಿದೆ.
ಸೌದಿ ಅರೇಬಿಯಾದ ನೈಋತ್ಯ ಪ್ರದೇಶಗಳಾದ ಜಿಝಾನ್, ಅಸೀರ್ ಮತ್ತು ಅಲ್ ಬಹಾದಲ್ಲಿ ಮಳೆ ಮತ್ತು ಮಂಜು ಮುಸುಕಿದ ವಾತಾವರಣ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಸಿದೆ. ಮದೀನಾ, ಅಲ್ ಕಸೀಮ್, ಅಲ್ ಜೌಫ್ ಮತ್ತು ಹಾಯಿಲ್ ಪ್ರದೇಶಗಳಲ್ಲಿಯೂ ಮಳೆಯ ಎಚ್ಚರಿಕೆ ನೀಡಲಾಗಿದೆ. ದೇಶದ ವಾಯುವ್ಯ ಗಡಿ ಪ್ರದೇಶಗಳಲ್ಲಿ ಚಳಿಗಾಲ ಮುಂದುವರಿದಿದೆ. ಇಂದು ಅಲ್ ಖುರಾಯತ್‌ನಲ್ಲಿ ಅತೀ ಕಡಿಮೆ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ದಾಖಲಿಸಲಾಗಿದೆ.