ಮಂಗಳೂರು, ಜ.17: ಬಂದೂಕು ತೋರಿಸಿ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಭಾರೀ ದರೋಡೆ ನಡೆದಿದೆ.
ಮಂಗಳೂರಿನ ಕೆ.ಸಿ ರೋಡ್ ಶಾಖೆಯ ಕೋಟೆಕಾರು ಸಹಕಾರಿ ಬ್ಯಾಂಕಿನಲ್ಲಿ ದರೋಡೆಯಾಗಿದೆ. ಹಾಡಹಗಲೇ ಬ್ಯಾಂಕ್ಗೆ ನುಗ್ಗಿದ ಐವರು ಆಘಂತುಕರು ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಫಿಯೆಟ್ ಕಾರಿನಲ್ಲಿ ಬಂದಿದ್ದ ದರೋಡೆಕೋರರಿಂದ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.
ಬಂದೂಕು ತೋರಿಸಿ ದರೋಡೆ ಮಾಡಿರುವ ಈ ಗ್ಯಾಂಗ್ ಬ್ಯಾಂಕ್ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ನಗದು ಮತ್ತು ಸುಮಾರು 10 ಕೋಟಿಯ ಚಿನ್ನಾಭರಣ ಕಳ್ಳತನ ಮಾಡಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕೆಸಿ ರೋಡ್ ಮುಸ್ಲಿಂ ಬಾಹುಳ್ಯ ಪ್ರದೇಶವಾಗಿರುವುದರಿಂದ ಶುಕ್ರವಾರ ಮಧ್ಯಾಹ್ನ ಅಂಗಡಿಗಳೆಲ್ಲ ಮುಚ್ಚಿ ಮುಸ್ಲಿಮರು ಮಸೀದಿಗೆ ತೆರಲುವ ಸಂಧರ್ಬವನ್ನೇ ದರೋಡೆಕೋರರು ಆರಿಸಿಕೊಂಡಿದ್ದರು. ಅದೂ ಅಲ್ಲದೇ ಬ್ಯಾಂಕಿನ ಸಿಸಿಟಿವಿ ಕೂಡಾ ದುರಸ್ತಿ ಕಾರ್ಯದಲ್ಲಿತ್ತು ಹಾಗೂ ಚಿನ್ನಾಭರಣಗಳನ್ನಿಟ್ಟ ಖಜಾನೆ ತೆರದೇ ಇತ್ತು ಎನ್ನಲಾಗುತ್ತಿದೆ.
ಮಧ್ಯಾಹ್ನ 1.15 ಗಂಟೆ ಸುಮಾರಿಗೆ ಖದೀಮರು ಗೋಣಿ ಚೀಲದಲ್ಲಿ ನಗದು ಮತ್ತು ಚಿನ್ನಾಭರಣಗಳನ್ನು ಹೊತ್ತು ಫಿಯೇಟ್ ಕಾರಿನಲ್ಲಿ ಪರಾರಿಯಾಗುವ ದೃಶ್ಯವು ಸಮೀಪದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರ ತಂಡ ದೌಡಾಯಿಸಿ ಪರಿಶೀಲಿಸುತ್ತಿದೆ. ಬ್ಯಾಂಕಿಗೆ ಸ್ಥಳೀಯ ಶಾಸಕರಾಗಿರುವ ಯುಟಿ ಖಾದರ್ ಆಗಮಿಸಿ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ.