janadhvani

Kannada Online News Paper

ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿ ಕೇರಳದ ಆಸ್ಪತ್ರೆಯಲ್ಲಿ ಚೇತರಿಕೆ!

67 ವರ್ಷದ ಪವಿತ್ರನ್ ಅವರು ಅಂತ್ಯಕ್ರಿಯೆಗೆ ಕೆಲವು ಗಂಟೆಗಳ ಮುನ್ನವೇ ಪುನರ್ಜೀವನ ಪಡೆದಿದ್ದಾರೆ.

ಕಣ್ಣೂರು (ಕೇರಳ): ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲ್ಪಟ್ಟ ವ್ಯಕ್ತಿ ಕೇರಳದಲ್ಲಿ ಜೀವಂತವಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಭಾವಿಸಲಾಗಿದ್ದ 67 ವರ್ಷದ ಪವಿತ್ರನ್ ಅವರು ಅಂತ್ಯಕ್ರಿಯೆಗೆ ಕೆಲವು ಗಂಟೆಗಳ ಮುನ್ನವೇ ಪುನರ್ಜೀವನ ಪಡೆದಿದ್ದಾರೆ.

ಕಣ್ಣೂರಿನ ಪಚ್ಚಪೊಯಿಕಾ ಮೂಲದ ವೆಳ್ಳುವಕ್ಕಂಡಿ ಪವಿತ್ರನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪಾರ್ಶ್ವವಾಯು ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದ ಹಿನ್ನಲೆಯಲ್ಲಿ ವೈದ್ಯರು, ಯಾವುದೇ ಭರವಸೆ ಇಲ್ಲ ಎಂದು ಕುಟುಂಬಕ್ಕೆ ತಿಳಿಸಿದರು. ಸೋಮವಾರ ಸಂಜೆಯ ವೇಳೆ ಪವಿತ್ರನ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು. ಮೃತದೇಹವನ್ನು ಹಸ್ತಾಂತರಿಸುವ ಮೊದಲು ವೈದ್ಯಕೀಯ ಖರ್ಚು ಬಾಕಿಯನ್ನು ಪಾವತಿಸುವಂತೆ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿದೆ.

ಅಂತ್ಯಕ್ರಿಯೆಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದ ಕುಟುಂಬವು ಪವಿತ್ರನ್ ಅವರ ದೇಹವನ್ನು ಅವರ ತವರೂರಾದ ಕಣ್ಣೂರಿಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಸಂಜೆ 6.30ರ ಸುಮಾರಿಗೆ ಅವರನ್ನು ಆಂಬ್ಯುಲೆನ್ಸ್ನಲ್ಲಿ ಕಣ್ಣೂರಿಗೆ ಕಳುಹಿಸಲಾಯಿತು. ರಾತ್ರಿ ತುಂಬಾ ತಡವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಸುಮಾರು ರಾತ್ರಿ 11.30 ಕ್ಕೆ, ಕಣ್ಣೂರಿನ ಎ.ಕೆ.ಜಿ ಆಸ್ಪತ್ರೆಯಲ್ಲಿ ಅವರ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಅದ್ಭುತ ಸಂಭವಿಸಿತು.

ಎಲೆಕ್ನಿಷಿಯನ್ ಅನೂಪ್ ಮತ್ತು ರಾತ್ರಿ ಸೂಪರ್ವೈಸರ್ ಆರ್ ಜಯನ್ ಎಂಬ ಇಬ್ಬರು ಸಿಬ್ಬಂದಿ ಪವಿತ್ರನ್ ಅವರ ಕೈಯಲ್ಲಿ ಸ್ವಲ್ಪ ಚಲನೆಯನ್ನು ಗಮನಿಸಿದರು. ಆರಂಭದಲ್ಲಿ ಪ್ರತಿಫಲಿತವೆಂದು ಪರಿಗಣಿಸಲಾಗಿದ್ದರೂ, ಗಮನವಿಟ್ಟ ಸಿಬ್ಬಂದಿಗಳು ನಾಡಿಮಿಡಿತವನ್ನು ಪರಿಶೀಲಿಸಿದರು. ಜೀವ ಇದೆ ಎಂದು ಅರಿತ ಅವರು ಪವಿತ್ರನ್ ಅವರನ್ನು ತುರ್ತು ವಿಭಾಗಕ್ಕೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಅವರು ನಿಜವಾಗಿಯೂ ಜೀವಂತವಾಗಿದ್ದಾರೆ ಎಂದು ದೃಢಪಡಿಸಿದರು.

ಬೆಳಕಿನ ಹೊತ್ತಿಗೆ, ಪವಿತ್ರನ್ ಅವರು ಪ್ರಜ್ಞೆ ಪಡೆದರು, “ಅವರು ನನ್ನತ್ತ ನೋಡಿದರು,” ಎಂದು ಅವರ ಪತ್ನಿ ಸುಧಾ ತಿಳಿಸಿದ್ದಾರೆ. ಕೆಲವು ಗಂಟೆಗಳ ಹಿಂದೆ ಮೃತಪಟ್ಟಿದ್ದ ಪವಿತ್ರನ್ ಐಸಿಯುನಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದಾಗ ಕುಟುಂಬಕ್ಕೆ ನಂಬಲು ಅಸಾಧ್ಯವಾಗಿತ್ತು.

ಸದ್ಯ ಪವಿತ್ರನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ಮಂಗಳೂರು ಆಸ್ಪತ್ರೆಯಲ್ಲಿ ಮರಣ ದೃಢೀಕರಣದ ನಿಖರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕುಟುಂಬವು ಈಗ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ. ಇಂತಹ ಗಂಭೀರ ತಪ್ಪು ಹೇಗೆ ಸಂಭವಿಸಬಹುದು ಎಂದು ಕುಟುಂಬ ಪ್ರಶ್ನಿಸುತ್ತಿದೆ. ಮಂಗಳೂರಿನ ದೇರಳಕಟ್ಟೆಯ ಕೆಎಸ್ ಹೆಗಡೆ ಆಸ್ಪತ್ರೆಯಲ್ಲಿ ಈ ಎಡವಟ್ಟು ಸಂಭವಿಸಿದೆ ಎಂದು ಮಲಯಾಳಂ ಪತ್ರಿಕೆಗಳು ವರದಿ ಮಾಡಿದೆ.

ಆದರೆ, ಹೆಗಡೆ ಆಸ್ಪತ್ರೆಯಿಂದ ರೋಗಿ ಸತ್ತಿರುವುದಾಗಿ ದೃಢೀಕರಣ ಪತ್ರ ನೀಡಿಲ್ಲ, ಹೊರತಾಗಿ ಶಿಷ್ಟಾಚಾರದ ಪ್ರಕಾರ ರೋಗಿಯ ಪ್ರಸ್ತುತ ಅವಸ್ಥೆಯನ್ನು ಸಂಬಂಧಿಕರಿಗೆ ವಿವರಿಸಿ DAMA ನಂತೆ ಡಿಸ್‌ಚಾರ್ಜ್ ಮಾಡಲಾಗಿದೆ. ವೈದ್ಯಕೀಯ ಸಲಹೆಯ ವಿರುದ್ಧ ರೋಗಿಯು ಡಿಸ್ಚಾರ್ಜ್ ಆದಾಗ ಅದನ್ನು DAMA ನಂತೆ ನೀಡಲಾಗುತ್ತದೆ. ರೋಗೀಯು ಮರಣ ಹೊಂದಿದ್ದರೆ ಮಾತ್ರ ಸತ್ತಿದ್ದಾನೆಂಬ ದೃಢೀಕರಣ ಪತ್ರ ನೀಡಲಾಗುತ್ತದೆ. ವೆಂಟಿಲೇಟರ್‌ನಿಂದ ಹೊರ ತೆಗದರೆ ರೋಗಿಯು ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದರು. ಅದನ್ನು ಕಡೆಗಣಿಸಿ ಡಿಸ್‌ಚಾರ್ಜ್ ಮಾಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಪವಿತ್ರನ್ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಮಲಯಾಳಂ ಪತ್ರಿಕೆಗೆ ನೀಡಿದ ವರದಿ

error: Content is protected !! Not allowed copy content from janadhvani.com