ಮದೀನತುಲ್ ಮುನವ್ವರಃ : ಮದೀನಾದಲ್ಲಿರುವ ಪ್ರವಾದಿ ಮಸೀದಿ(ಮಸ್ಜಿದುನ್ನಬವಿ)ಯಲ್ಲಿ ರೌಳಾ ಷರೀಫ್ ಸಂದರ್ಶನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ಮುಂದೆ ಪ್ರತಿ 20 ನಿಮಿಷಕ್ಕೊಮ್ಮೆ ಅಪಾಯಿಂಟ್‌ಮೆಂಟ್ ಮಾಡುವ ಮೂಲಕ ರೌಳಾವನ್ನು ಭೇಟಿ ಮಾಡಬಹುದು.
ಜನಸಂದಣಿ ನಿಯಂತ್ರಣದ ಭಾಗವಾಗಿ, ಓರ್ವ ವ್ಯಕ್ತಿಗೆ ವರ್ಷಕ್ಕೊಮ್ಮೆ ಮಾತ್ರ ರೌಳಾಗೆ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಸಲಾಗಿದೆ. ಇದಕ್ಕಾಗಿ ನುಸುಕ್ ಆ್ಯಪ್ ‘ಇಮ್ಮಿಡಿಯೇಟ್ ಪಾತ್’ ಎಂಬ ವಿಶೇಷ ಆಯ್ಕೆಯನ್ನು ಹೊಂದಿದೆ. ಇದರಿಂದಾಗಿ ಆಗಾಗ ಭೇಟಿ ನೀಡುವ ಅವಕಾಶ ಸಿಗಲಿದೆ. ಪ್ರವಾದಿ ಮಸೀದಿಯ ಸಮೀಪ ತಲುಪಿದ ನಂತರ ಈ ಆಯ್ಕೆಯ ಮೂಲಕ ಪರವಾನಗಿ ಪಡೆಯಲು ಸಾಧ್ಯವಿದೆ. ಇದನ್ನು ನುಸುಕ್ ಆ್ಯಪ್ ಮ್ಯಾನೇಜ್‌ಮೆಂಟ್ ವಿವರಿಸಿದೆ.
ಪ್ರತಿ ಗ್ರೂಪಿಗೆ ರೌಳಾದಲ್ಲಿ ಪ್ರಾರ್ಥನೆ ಮಾಡಲು ಹತ್ತು ನಿಮಿಷಗಳಿವೆ. ಭೇಟಿ ನೀಡುವವರು ಅರ್ಧ ಗಂಟೆ ಮುಂಚಿತವಾಗಿ ರೌಳಾ ಸಮೀಪ ತಲುಪಬೇಕು ಎಂಬ ಸಲಹೆಯೂ ಇದೆ. ಪ್ರವಾದಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಪ್ರವಾದಿ ಸನ್ನಿಧಿಯಲ್ಲಿ ಸಲಾಂ ಹೇಳುವುದು ಮುಂತಾದವುಗಳಿಗೆ ಪರವಾನಗಿ ಅಗತ್ಯವಿಲ್ಲ.
ಮದೀನಾದ ಮಸೀದಿಯಲ್ಲಿ ಪ್ರವಾದಿಯವರು ಬೋಧಿಸಿದ ಮಿಂಬರ್ ಮತ್ತು ಪ್ರವಾದಿಯವರ ಮನೆ ನಡುವಿನ ಸ್ಥಳವೇ ರೌಳಾ ಶರೀಫ್. ಇಲ್ಲಿ ಪ್ರಾರ್ಥನೆ ಸಲ್ಲಿಸಲು ಪರವಾನಗಿ ಅಗತ್ಯವಿದೆ.