ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಸಮೀಪದ ಸಚ್ಚರಿಪೇಟೆ ನಿವಾಸಿ ಮುಹಮ್ಮದ್ ಬಾಬುರವರು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದಿನಲ್ಲಿ ಹೃದಯಾಘಾತದಿಂದ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ರಿಯಾದ್ ನಸೀಮ್ ಸಾರ್ವಜನಿಕ ದಫನ ಭೂಮಿಯಲ್ಲಿ ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.
ಮುಹಮ್ಮದ್ ಬಾಬುರವರು ಮರಣ ಹೊಂದಿದ ಮಾಹಿತಿ ಸಿಕ್ಕ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಕಾರ್ಯಕರ್ತರು ಮೃತದೇಹವಿರುವ ಆಸ್ಪತ್ರೆಗೆ ಆಗಮಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ದಾಖಲೆಗಳನ್ನು ಮಾಡಬೇಕಾಗಿದ್ದು, ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಸಮಿತಿ ನಾಯಕರಾದ ಅಬ್ದುಸಲಾಂ ಹಳೆಯಂಗಡಿ, ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಭಾಷಾ ಗಂಗಾವಳಿ ಮಾರ್ಗದರ್ಶನದಲ್ಲಿ ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರಾದ ಅಶ್ರಫ್ KMS, ದಾವೂದ್ ಸಅದಿ ಇನ್ನಿತರ ನೇತಾರರು ಹಾಗೂ ಮೃತರ ಕುಟುಂಬಸ್ಥರಾದ ಶೇಖ್ ಹರ್ಷಿಫ್ ಮುಂಚೂಣಿಯಲ್ಲಿದ್ದುಕೊಂಡು ಎಲ್ಲಾ ಕಾರ್ಯಗಳನ್ನು ಯಾವುದೇ ಕುಂದುಕೊರತೆಗಳಿಲ್ಲದಂತೆ ಚೆನ್ನಾಗಿ ನಿಭಾಯಿಸಿದ್ದಾರೆ.
ರಿಯಾದಿನ ಅಲ್-ನಸೀಮ್ ಸಾರ್ವಜನಿಕ ದಫನ ಭೂಮಿಯಲ್ಲಿ ನಡೆದ ಜನಾಝ ನಮಾಝ್ ಮತ್ತು ದಫನ ಕಾರ್ಯದಲ್ಲಿ ಕೆಸಿಎಫ್ ರಾಷ್ಟ್ರೀಯ ಮತ್ತು ಝೋನ್ ನೇತಾರರು ಕಾರ್ಯಕರ್ತರು ಕುಟುಂಬಸ್ಥರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರು ಸಮೇತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.