janadhvani

Kannada Online News Paper

ಕೋಮುವಾದಿಗಳನ್ನು ಸೋಲಿಸಿ: ಕರ್ನಾಟಕ ಮುಸ್ಲಿಂ ಜಮಾಅತ್ ಕರೆ

ಸಮಾನತೆ, ಸಹಬಾಳ್ವೆಯ ಮೂಲಕ ವಿಶ್ವದ ಗಮನ ಸೆಳೆದಿದ್ದ ಕರ್ನಾಟಕ ಈ ಹಿಂದೆ ಯಾವತ್ತೂ ಕಂಡರಿಯದ ಕೋಮು ದ್ವೇಷ, ತಾರತಮ್ಯ, ಅಲ್ಪಸಂಖ್ಯಾತರ ಹಕ್ಕುಗಳ ದಮನಕ್ಕೆ ಸಾಕ್ಷಿಯಾಗುತ್ತಿದ್ದು, ಕೋಮುವಾದಿ ಪಕ್ಷಗಳನ್ನು ಸೋಲಿಸುವ ಮೂಲಕ ರಾಜ್ಯದ ಜಾತ್ಯತೀತ, ಸಹಬಾಳ್ವೆಯ ಪರಂಪರೆಯನ್ನು ಮರಳಿ ಸ್ಥಾಪಿಸುವ ಧೀರ ನಿರ್ಧಾರವನ್ನು ಈ ರಾಜ್ಯದ ಮತದಾರರು ತೆಗೆಯಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಕರೆ ನೀಡಿದೆ.

ಮತದಾರರ ತೀರ್ಮಾನವೇ ಈ ರಾಜ್ಯದ ಭವಿಷ್ಯವಾಗಿದ್ದು ಯಾವ ಕಾರಣಕ್ಕೂ ಕೋಮುವಾದಿಗಳು ಈ ರಾಜ್ಯವನ್ನು ಆಳಲು ಬಿಡಬಾರದೆಂದು ಮುಸ್ಲಿಂ ಜಮಾಅತ್ ರಾಜ್ಯದ ಮತದಾರರನ್ನು ವಿನಂತಿಸಿದೆ. ಸಂಘಟನೆಯ ಯುವಜನ ಮತ್ತು ವಿದ್ಯಾರ್ಥಿ ಘಟಕವಾದ SYS ಮತ್ತು SSF ಸಂಘಟನೆಯ ಲಕ್ಷಾಂತರ ಕಾರ್ಯಕರ್ತರು ‘ ಕೋಮುವಾದಿಗಳನ್ನು ಮತದಾನದಿಂದ ಸೋಲಿಸಿ’ ಎಂಬ ಕೇಂದ್ರ ವಿಷಯದಲ್ಲಿ ರಾಜ್ಯಾಧ್ಯಂತ ಮತದಾರರ ಜಾಗೃತಿ ನಡೆಸುತ್ತಿದ್ದಾರೆ.

ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಈ ರಾಜ್ಯದ ಅಲ್ಪಸಂಖ್ಯಾತರು ಅನುಭವಿಸಿದ ಎಲ್ಲ‌ ಕಡೆಗಣನೆ, ತಾರತಮ್ಯ, ನೋವುಗಳಿಗೆ ನಾವು ನೀಡುವ ಪ್ರತ್ಯುತ್ತರವೇ ಮತದಾನವಾಗಿದ್ದು ದಯವಿಟ್ಟು ಮತಗಳು ವಿಭಜನೆಯಾಗದಂತೆ, ದುರ್ಬಲ ವಾಗದಂತೆ ನೋಡಿಕೊಂಡು ಕೋಮುವಾದಿಗಳನ್ನು ಸೋಲಿಸಿ ಎಂದು ಸಂಘಟನೆ ವಿನಂತಿಸಿದೆ. ರಾಜ್ಯದ ಎಲ್ಲಾ ಮತದಾನ ಕೇಂದ್ರಗಳಲ್ಲಿ ಗರಿಷ್ಠ ಮತದಾನ ನಡೆಯುವಂತೆ ಮತ್ತು ಮತ ವಿಭಜನೆ ನಡೆಯದಂತೆ ಮತದಾರರ ಜಾಗೃತಿ ನಡೆಸಲು ಸಂಘಟನೆಯ ಎಲ್ಲಾ ಘಟಕಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸುತ್ತೋಲೆ ಹೊರಡಿಸಿದೆ.

ಮತಗಳ ವಿಭಜನೆಯೇ ಕೋಮುವಾದಿಗಳ ವಿಜಯವಾಗಿದ್ದು ವಿಜಯ ಸಾಧ್ಯತೆ ಹೆಚ್ಚಿರುವ ಜಾತ್ಯತೀತ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುವ ಮೂಲಕ ಕೋಮುವಾದಿಗಳು ಗೆಲ್ಲುವ ಅವಕಾಶವನ್ನು ತಪ್ಪಿಸಿ ಎಂದು ಮುಸ್ಲಿಂ ಜಮಾಅತ್ ವಿನಂತಿಸಿದೆ.

ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ ಮುಹಮ್ಮದ್ ಫಾಝಿಲ್ ರಝ್ವಿ, ಪ್ರ.ಕಾರ್ಯದರ್ಶಿ ಅಬೂಸುಫಿಯಾನ್ ಮದನಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com