janadhvani

Kannada Online News Paper

ಕಠುವಾ ಅತ್ಯಾಚಾರ ಪ್ರಕರಣ: ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ ಆರೋಪಿ

ನವದೆಹಲಿ: ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪ್ರಮುಖ ಆರೋಪಿ ಸಾಂಜಿ ರಾಮ್‌, ಸುಪ್ರೀಂ ಕೋರ್ಟ್‌ನಲ್ಲಿ ‘ನಾನು ಮುಗ್ಧ’ ಎಂದು ಹೇಳಿಕೊಂಡಿದ್ದು, ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾನೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಮೂಲಕ ನಿಜವಾದ ಅಪರಾಧಿಗಳನ್ನು ಬಂಧಿಸಿ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ಕೇಳಿಕೊಂಡಿದ್ದಾನೆ.

ಕಠುವಾ ಜಿಲ್ಲೆಯ ರಸಾನಾ ಎಂಬ ಗ್ರಾಮದಲ್ಲಿ ಜ.17ರಂದು ಕುದುರೆ ಮೇಯಿಸುತ್ತಿದ್ದ ಅಲೆಮಾರಿ ಜನಾಂಗದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಏಳು ದಿನ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಲಾಗಿತ್ತು. ಘಟನೆ ನಡೆದ ವಾರದ ಬಳಿಕ ಬಾಲಕಿಯ ಶವ ಕಾಡಿನಲ್ಲಿ ಪತ್ತೆಯಾಗಿತ್ತು.

ಅಲೆಮಾರಿ ಜನಾಂಗವನ್ನು ಗ್ರಾಮದಿಂದ ಓಡಿಸುವುದಕ್ಕಾಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಷಡ್ಯಂತ್ರ ಮಾಡಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಈ ಅಮಾನವೀಯ ಕೃತ್ಯದ ಸುದ್ದಿ ದೇಶದಾದ್ಯಂತ ತಲ್ಲಣ ಮೂಡಿಸಿತ್ತು. ಬಳಿಕ, ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂಬ ಒತ್ತಡ ವ್ಯಾಪಕವಾಗಿ ವ್ಯಕ್ತವಾಗಿತ್ತು.

221 ಸಾಕ್ಷಿಗಳು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕಠುವಾದಿಂದ 265 ಕಿ.ಮೀ. ದೂರದಲ್ಲಿರುವ ಚಂಡೀಗಢಕಕ್ಕೆ ಪ್ರಯಾಣಿಸಲು ಕಷ್ಟವಾಗುತ್ತದೆ ಎಂದು ಹೇಳಿರುವ ಆರೋಪಿ, ಎಂಟು ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸಲು ಕೋರಿದ್ದ ಅರ್ಜಿಯನ್ನು ಸಾಂಜಿ ರಾಮ್‌ ವಿರೋಧಿಸಿದ್ದಾನೆ.

ಜತೆಗೆ, ಸಂತ್ರಸ್ತೆಯ ಪರ ವಕೀಲೆ ದೀಪಿಕಾ ಸಿಂಗ್‌ ರಜಾವತ್‌ ಅವರು ವಿಚಾರಣಾ ನ್ಯಾಯಾಲಯದಲ್ಲಿ ವಕೀಲರಾಗಿಲ್ಲ ಮತ್ತು ಅವರಿಗೆ ನೀಡಿದ ಭದ್ರತೆಯನ್ನು ತೆಗೆದು ಹಾಕಬೇಕು ಎಂದು ಸಾಂಜಿ ರಾಮ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾನೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

‘ಸಂತ್ರಸ್ತೆಯ ತಂದೆಗೆ ನೀಡಿದ ಭದ್ರತೆಯನ್ನು ಮುಂದುವರಿಸಬೇಕು. ಅವರ ಪರ ವಕೀಲೆ ದೀಪಿಕಾ ಸಿಂಗ್‌ ರಜಾವತ್‌ ಮತ್ತು ಅವರ ಸಹಾಯಕರಿಗೂ ಭದ್ರತೆ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಹೇಳಿತ್ತು.

error: Content is protected !! Not allowed copy content from janadhvani.com