ದಮ್ಮಾಮ್: ಸೌದಿ ಅರೇಬಿಯಾ(Saudi Arabia) ದಲ್ಲಿ ಗೃಹ ಕಾರ್ಮಿಕರಿಗೆ ಉದ್ಯೋಗ ಒಪ್ಪಂದ( Employment Conract) ಕಡ್ಡಾಯವಾಗಿದೆ. ಮನೆ ಚಾಲಕರು(House Driver) ಸೇರಿದಂತೆ ಎಲ್ಲಾ ಗೃಹ ಕಾರ್ಮಿಕರು ಮಾನವ ಸಂಪನ್ಮೂಲ ಸಚಿವಾಲಯ(Ministry of Human Resources and Social Development) ದ ಆನ್‌ಲೈನ್ ಪ್ಲಾಟ್‌ಫಾರ್ಮ್ ‘ಮುಸಾನಿದ್’ ಮೂಲಕ ಒಪ್ಪಂದಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಸಚಿವಾಲಯವು ನಿರ್ದೇಶಿಸಿದೆ.
ದೇಶದಲ್ಲಿ ಗೃಹ ಕಾರ್ಮಿಕರ ವೀಸಾದಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಮಾನವ ಸಂಪನ್ಮೂಲ ಸಚಿವಾಲಯವು ಉದ್ಯೋಗ ಒಪ್ಪಂದವನ್ನು ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಿದೆ.
ಸಚಿವಾಲಯದ ಆನ್‌ಲೈನ್ ಪ್ಲಾಟ್‌ಫಾರ್ಮ್ ಮುಸಾನಿದ್ ಮೂಲಕ ಒಪ್ಪಂದವನ್ನು ನಮೂದಿಸಬೇಕು. ಪ್ರಸ್ತುತ , ಹೊಸ ವೀಸಾದಲ್ಲಿ ದೇಶಕ್ಕೆ ಆಗಮಿಸುವ ಗೃಹ ಕಾರ್ಮಿಕರಿಗೆ ಮಾತ್ರ ಈ ಅವಶ್ಯಕತೆ ಅನ್ವಯವಾಗಿತ್ತು.
ಎಲ್ಲಾ ಉದ್ಯೋಗದಾತರು ತಮ್ಮ ಮನೆಕೆಲಸಗಾರು ಕಾಲಾವಧಿ ಇರುವ ನಿಶ್ಚಿತ ಉದ್ಯೋಗ ಒಪ್ಪಂದವನ್ನು ಹೊಂದಿದ್ದಾರೆ ಎಂಬುದನ್ನು ಮುಸಾನಿದ್ ಮೂಲಕ ಖಚಿತಪಡಿಸಿಕೊಳ್ಳಬೇಕು. ಇಲ್ಲದವರಿಗೆ ಒಪ್ಪಂದವನ್ನು ನೋಂದಾಯಿಸಲು ಅಗತ್ಯವಾದ ಕ್ರಮಗಳನ್ನು ತಕ್ಷಣವೇ ಪೂರ್ಣಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯವು ತಿಳಿಸಿದೆ.
ಉದ್ಯೋಗ ಒಪ್ಪಂದದ ಅವಧಿ, ವೇತನಗಳು, ಜವಾಬ್ದಾರಿಗಳು ಮತ್ತು ರಜಾದಿನಗಳನ್ನು ಒಪ್ಪಂದದಲ್ಲಿ ನಿರ್ದಿಷ್ಟಪಡಿಸಬೇಕು. ಈ ಕ್ರಮವು ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಸಮಸ್ಯೆಗಳನ್ನು ನಿವಾರಿಸುವ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಭಾಗವಾಗಿದೆ.