ದುಬೈ: ತಾಂತ್ರಿಕ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸುತ್ತಿರುವ ಆಧುನಿಕ ಯುಗದಲ್ಲಿ, ಮಾನವೀಯ ಮೌಲ್ಯಗಳು ನಿರ್ಮೂಲನಾ ಹಂತಕ್ಕೆ ತಲುಪಿದೆ. ಮಾನವನು ಮೃಗಗಳಿಗಿಂತಲೂ ಹೀನಾಯವಾಗಿ ವರ್ತಿಸುತ್ತಿದ್ದಾನೆ. ತನ್ನ ಜೀವನವನ್ನು ಕೇವಲ ಜೂಜಾಟಕ್ಕೂ, ಕಾಮ ತೃಷೆ ತೀರಿಸಲೂ, ಲೂಟಿಕೋರತನಕ್ಕೂ, ಅನೈತಿಕತೆಗೂ ವ್ಯಯಿಸುತ್ತಿದ್ದಾನೆ. ಹಿರಿಯ- ಕಿರಿಯ, ಗಂಡು-ಹೆಣ್ಣುಗಳೆಂಬ ಬೇಧ ಭಾವವಿಲ್ಲದೆ ಆಧುನಿಕ ಜನತೆ ನ್ಯೂಜನರೇಷನ್ ಎಂಬ ಹಣೆಪಟ್ಟಿ ಕಟ್ಟಿ ತನಗಿಷ್ಟಬಂದಂತೆ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾನೆ. ಧಾರ್ಮಿಕತೆಯಲ್ಲಿ ಆತ್ಮೀಯವಾಗಿ ವಿಕಸನ ಹೊಂದಬೇಕಾಗಿದ್ದ ಮನುಷ್ಯನ ಮನಸ್ಸುಗಳು ಇಂದು ಕಠೋರ ಹೃದಯಗಳಾಗಿ ಮಾರ್ಪಾಡು ಹೊಂದಿದೆ. ವಿಧ್ಯಾ ಸಂಪನ್ನರೆನಿಸಿಕೊಂಡವರೇ ಇಂದು ನೀಚ ಕಾಯಕಕ್ಕೆ ಇಳಿದಿರುವುದು ನಿಜಕ್ಕೂ ವಿಪರ್ಯಾಸ. ವಿದ್ಯೆ ಅಭ್ಯಸಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳುವ ತರಬೇತಿ ನೀಡುವ ವಿದ್ಯಾಸಂಸ್ಥೆಗಳು ಇಂದು ಬೇಕಾಗಿದೆ ಎಂದು ಶರಪುಲ್ ಉಲಮಾ ಅಬ್ಬಾಸ್ ಉಸ್ತಾದರು ದುಬೈಯಲ್ಲಿ ಇತ್ತೀಚೆಗೆ ನಡೆದ ಅಲ್ ಮದೀನಾ ಮಂಜನಾಡಿ ಇದರ ಬೆಳ್ಳಿ ಹಬ್ಬದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಬೆಳ್ಳಿಹಬ್ಬದ ಪ್ರಚಾರ ಸಮಿತಿಯ ಅಧ್ಯಕ್ಷ ಪಿ.ಎಂ ಇಬ್ರಾಹಿಂ ಸ’ಅದಿ ಸಾಮಣೀಗೆಯವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ಮಹಾ ಸಭೆಯನ್ನು ಕರ್ನಾಟಕ ರಾಜ್ಯ ಎಸ್’ವೈ’ಎಸ್ ಪ್ರಧಾನ ಕಾರ್ಯದರ್ಶಿ ಎಂಎಸ್’ಎಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಕರ್ನಾಟಕದಾದ್ಯಂತ ವಿಜ್ಞಾನದ ಕ್ರಾಂತಿಯನ್ನು ಸೃಷ್ಟಿಸುತ್ತಿರುವ ಅಲ್ ಮದೀನಾ ಮಂಜನಾಡಿಯು ಕರ್ನಾಟಕದ ಹೆಮ್ಮೆಯ ಸಂಸ್ಥೆ. ಈ ಸಂಸ್ಥೆಯಲ್ಲಿ ಸಾವಿರಾರು ವಿಧ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ದೇಶವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಇಂದು ಅಲ್ ಮದೀನಾ ಸಂತತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳ್ಳಿಹಬ್ಬದ ತಯಾರಿಯಲ್ಲಿರುವ ಅಲ್ ಮದೀನಾ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಹಾರೈಸುತ್ತಾ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಯುವ ವಾಗ್ಮಿ ಹಂಝ ಮಿಸ್ಬಾಹಿ ಒಟ್ಟಪದವು ಮುಖ್ಯ ಪ್ರಭಾಷಣ ನಿರ್ವಹಿಸಿದರು. ಕೇರಳದಾದ್ಯಂತ ವಿಧ್ಯಾಸಂಸ್ಥೆಗಳು ತಲೆ ಎತ್ತಿ ನಿಂತಿದ್ದರೂ ಕರ್ನಾಟಕದ ವಿಧ್ಯಾಸಂಸ್ಥೆಯತ್ತ ಕೇರಳೀಯರು ಆಶ್ರಯಿಸಿರುವುದು ಆಶ್ಚರ್ಯಕರ. ಕರ್ನಾಟಕದಾದ್ಯಂತಹ ಕಾರ್ಯಾಚರಿಸುತ್ತಿರುವ ಅಲ್ ಮದೀನಾ ಮೊದಲಾದ ಸಂಸ್ಥೆಗಳಲ್ಲಿ ಕೇರಳೀಯ ವಿಧ್ಯಾರ್ಥಿಗಳ ಸಂಖ್ಯೆ ಅಗಣಿತ. ಉತ್ತಮ ವಿಧ್ಯಾಬ್ಯಾಸದ ಜೊತೆಗೆ ಮಲಯಾಳಿ ವಿಧ್ಯಾರ್ಥಿಗಳು ಕನ್ನಡ ಭಾಷೆಯನ್ನು ಕರಗತಗೊಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪವಿತ್ರ ಶ’ಅಬಾನ್ ತಿಂಗಳ ಮಹತ್ವವನ್ನು ವಿವರಿಸಿ ಮಾತನಾಡಿದ ಅವರು ಸಂಸ್ಥೆಯ ಬೆಳ್ಳಿ ಹಬ್ಬ ಆಚರಣೆಗೆ ಸರ್ವ ವಿಧ ಶುಭಾಷಯಗಳನ್ನು ಕೋರಿದರು.ಸಮಾರಂಭದ ಕೆಂದ್ರಬಿಂದುವಾಗಿದ್ದ ಉಳ್ಳಾಲ ಖಾಝಿ ಅಸಯ್ಯಿದ್ ಫಝಲ್ ಕೋಯಮ್ಮಾ ಕೂರಾ ತಂಙಳ್ ಪ್ರಾರ್ಥನಾ ಸಭೆಗೆ ನೇತೃತ್ವ ವಹಿಸಿದರು. ಕಲುಷಿತಗೊಂಡಿರುವ ಆಧುನಿಕ ಯುಗದಲ್ಲಿ ಧಾರ್ಮಿಕವಾಗಿ ಆತ್ಮೀಯತೆಯ ಜೀವನಕ್ಕೆ ಒತ್ತು ನೀಡುವಂತೆ ಉಪದೇಶಿಸಿದ ಅವರು ಭಕ್ತಿನಿರ್ಭಲ ಪ್ರಾರ್ಥನೆಯಲ್ಲಿ ಸಭಿಕರ, ಅಲ್ ಮದೀನಾ ಹಿತೈಷಿಗಳ, ವಿಧ್ಯಾ ಸಂಸ್ಥೆಗಳ ಸಹಕಾರಿ ವರ್ಗದ ಅಭ್ಯುದಯಕ್ಕಾಗಿ, ಸಂಸ್ಥೆಯ ಉನ್ನತಿಗಾಗಿ ಪ್ರಾರ್ಥಿಸಿದರು.
ಬುರ್ದಾ ಆಲಾಪನೆಯ ಬಳಿಕ ಅಲ್ ಮದೀನಾ ವಿದ್ಯಾ ಸಂಸ್ಥೆಯ ಇಪ್ಪತ್ತೈದು ವರ್ಷಗಳ ಕಾರ್ಯಾಚರಣೆನ್ನು ಹೃಸ್ವವಾಗಿ ವಿವರಿಸುವ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಮರ್ಕಝುಲ್ ಹುದಾ ಕುಂಬ್ರದ ಉಪ ಪ್ರಾಂಶುಪಾಲರಾದ ಹಂಝ ಮದನಿ ಮಿತ್ತೂರು, ಅಶ್ರಫ್ ಹಾಜಿ ಅಡ್ಯಾರ್, ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಜಲೀಲ್ ನಿಝಾಮಿ ಕೊಡಗು, ಮೊದಲಾದ ಉಲಮಾ ಉಮರಾ ನೇತಾರರು ಪಾಲ್ಗೊಂಡಿದ್ದರು.
ದುಬೈ ಅಲ್ ಮದೀನಾ ಓರ್ಗನೈಸರ್ ಉಮರ್ ಮುಸ್ಲಿಯಾರ್ ಸ್ವಾಗತಿಸಿ, ಪ್ರಚಾರ ಸಮಿತಿಯ ನಿರ್ವಹಣಾಧಿಕಾರಿ ಮೂಸಾ ಹಾಜಿ ಬಸರ ಧನ್ಯವಾದವಿತ್ತು, ಕೆಸಿಎಫ್ ಓರ್ಗನೈಸರ್ ಕಬೀರ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.