janadhvani

Kannada Online News Paper

ಎಲ್ಲವೂ ಸುಳ್ಳು ಸುದ್ದಿ, ಪಾಕಿಸ್ತಾನ ವೀಸಾ ನಿರಾಕರಿಸಿಲ್ಲ – ಶಿಹಾಬ್ ಚೋಟೂರ್ ಸ್ಪಷ್ಟನೆ

ಪಂಜಾಬ್ ಶಾಹಿ ಇಮಾಮ್ ಅವರ ಮಾತುಗಳನ್ನು ಆಧರಿಸಿ,ಶಿಹಾಬ್‌ಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರಗೊಂಡಿತ್ತು.

ಮಲಪ್ಪುರಂ: ಹಜ್ ಯಾತ್ರೆಗೆ ಮಲಪ್ಪುರಂನಿಂದ ಸೌದಿ ಅರೇಬಿಯಾಕ್ಕೆ(Malappuram to Saudi Arabia) ಕಾಲ್ನಡಿಗೆಯಲ್ಲಿ( Walk to Makkah) ತೆರಳುತ್ತಿರುವ ವಲಾಂಚೇರಿ ಮೂಲದ ಶಿಹಾಬ್ ಚೋಟೂರ್( Shihab Chottur) ಅವರು ತಮಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂಬುದು ಅಪ್ಪಟ ಸುಳ್ಳು ಸುದ್ದಿ ಎಂದು ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿ ಆಧಾರ ರಹಿತ ಮತ್ತು ಹುಸಿಯಾಗಿದೆ ಎಂದು ಶಿಹಾಬ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಿಳಿಸಿದ್ದಾರೆ.

ಶಿಹಾಬ್, ಯಾತ್ರೆ ಆರಂಭಿಸಿ 126 ದಿನಗಳಾಗಿವೆ. ಶಿಹಾಬ್ ಈಗಾಗಲೇ 3,200 ಕಿ.ಮೀ. ದಾಟಿ ನಡಿಗೆ ಮುಂದುವರಿದಿದೆ. ಶೇ 35 ರಿಂದ 40 ರಷ್ಟು ಪ್ರಯಾಣ ಪೂರ್ಣಗೊಂಡಿದೆ ಎಂದು ಶಿಹಾಬ್ ಹೇಳಿದರು. ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಹೊರಗೆ ಹರಡುತ್ತಿರುವುದು ಸುಳ್ಳು ಸುದ್ದಿ ಎಂದು ಅಲ್ಲಾಹನ ನಾಮದಲ್ಲಿ ಹೇಳುತ್ತಿದ್ದೇನೆ ಎಂದು ಶಿಹಾಬ್ ಹೇಳುತ್ತಾರೆ.

ಪಂಜಾಬ್ ಶಾಹಿ ಇಮಾಮ್ ಅವರ ಮಾತುಗಳನ್ನು ಆಧರಿಸಿ, ಶಿಹಾಬ್‌ಗೆ ಪಾಕಿಸ್ತಾನ ವೀಸಾ(Pakistan Visa) ನಿರಾಕರಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರಗೊಂಡಿತ್ತು.

ಶಿಹಾಬ್ ಅವರ ಕಾಲ್ನಡಿಗೆ ಹಜ್ ಯಾತ್ರೆಯು, ಮಲಪ್ಪುರಂನ ವಲಾಂಚೇರಿಯಿಂದ ಪ್ರಾರಂಭಗೊಂಡು, ಬಹಳ ಜನಪ್ರಿಯವಾಗಿತ್ತು. ಶಿಹಾಬ್ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡೆದುಕೊಂಡು ಹೋಗುವಾಗ ಅನೇಕ ಜನರು ಜೊತೆಗೂಡುತ್ತಾರೆ. ಶಿಹಾಬ್ 2023 ರ ಹಜ್ ಯಾತ್ರೆಯ ಭಾಗವಾಗಲು 8,640 ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಮಕ್ಕಾವನ್ನು ತಲುಪಲು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ಜೂನ್ 2ರಂದು ಆರಂಭವಾದ ಯಾತ್ರೆ 280 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದೀಗ ಅವರ ಪಯಣ ವಾಘಾ ಗಡಿ( Wagah Border) ತಲುಪಿದೆ. ಪ್ರಯಾಣಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗಿವೆ.

ವಾಘಾ ಗಡಿ(India-Pak Border) ಮೂಲಕ ಪಾಕಿಸ್ತಾನ(Pakistan) ತಲುಪಿ ಅಲ್ಲಿಂದ ಇರಾನ್(Iran) , ಇರಾಕ್(Iraq) ಮತ್ತು ಕುವೈತ್(Kuwait) ಮೂಲಕ ಸೌದಿ ಅರೇಬಿಯಾ(Saudi Arabia) ತಲುಪಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಐದು ದೇಶಗಳ ವೀಸಾ ಪಡೆದುಕೊಂಡು ಶಿಹಾಬ್ ಪ್ರಯಾಣ ಬೆಳೆಸಿದ್ದಾರೆ. ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂಬ ಸುದ್ದಿಗೆ ಯಾವುದೇ ಆಧಾರವಿಲ್ಲ ಮತ್ತು ಅಧಿಕೃತ ಸೂಚನೆ ಇನ್ನೂ ಬಂದಿಲ್ಲ ಎಂದು ಶಿಹಾಬ್ ವಿಡಿಯೋದಲ್ಲಿ ಹೇಳಿದ್ದಾರೆ.

ಕೆಟಗರಿ ಸಮಸ್ಯೆಯ ಕಾರಣದಿಂದಾಗಿ ತಡೆ ಉಂಟಾಗಿದೆ, ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಇರಾನ್ ಗೆ ಹೋಗಬೇಕಾದರೆ ಟ್ರಾನ್ಸಿಟ್ ವೀಸಾ ಬೇಕಾಗಿದೆ. ಸದ್ಯ ನನಗೆ ಟೂರಿಸ್ಟ್ ವೀಸಾ ಸಿಕ್ಕಿದ್ದರಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿ ಇರಾನಿನ ತಪ್ತಾನ್ ಗಡಿಯ ಮೂಲಕ ಇರಾನಿಗೆ ಪ್ರವೇಶಿಸಬೇಕಿದೆ ಮತ್ತು ಇದಕ್ಕಾಗಿ ವಿದೇಶಾಂಗ ಸಚಿವಾಲಯದ ಒಂದು ದಾಖಲೆ ಕೂಡ ಬೇಕಿದೆ. ಅದು ಲಭ್ಯವಾದರೆ ಟ್ರಾನ್ಸಿಟ್ ವೀಸಾ ಕೂಡ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸ್ಪಲ್ಪ ವಿಳಂಬವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.