janadhvani

Kannada Online News Paper

ಶ್ರೀಲಂಕಾ: ಬಾಂಬ್ ಸ್ಫೋಟದ ಬಳಿಕ ಮುಸ್ಲಿಂ ಅಂಗಡಿಗಳಿಗೆ ವ್ಯಾಪಾರವಿಲ್ಲ

ಕೊಲಂಬೊ: ಈಸ್ಟರ್ ಬಾಂಬ್ ಸ್ಫೋಟದ ಬಳಿಕ ಗ್ರಾಹಕರು ಮುಸ್ಲಿಂ ಅಂಗಡಿಗಳಿಂದ ಖರೀದಿಸುವುದನ್ನು ನಿಲ್ಲಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಪಶ್ಚಿಮ ಶ್ರೀಲಂಕಾದ ತಮ್ಮ ಅಂಗಡಿಯು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ್ದ ಹಾರ್ಡ್‌ವೇರ್ ಅಂಗಡಿ ಮಾಲೀಕರಾದ ಮೊಹಮ್ಮದ್ ಇಲ್ಯಾಸ್ ಅವರು ಈಗ ಅವರ ವ್ಯಾಪಾರ ಕುಸಿದಿದೆ ಮತ್ತು ಭಾರೀ ನಷ್ಟವುಂಟಾಗಿದೆ ಎಂದಿದ್ದಾರೆ.

ಅವರ ಅಂಗಡಿಯು ರಾಜಧಾನಿ ಕೊಲಂಬೊದಿಂದ 90 ಕಿಲೋಮೀಟರ್ ದೂರದಲ್ಲಿರುವ ಕೊಟ್ಟರಮುಲ್ಲಾ ಗ್ರಾಮದಲ್ಲಿದೆ, ಅಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದು, ಬಹುಪಾಲು ಸಿಂಹಳೀಯರು ವಾಸಿಸುತ್ತಿದ್ದಾರೆ. ದಶಕಗಳಿಂದ, ಇಲ್ಯಾಸ್ ಎಲ್ಲಾ ಧರ್ಮೀಯರೊಂದಿಗೂ ಉತ್ತಮ ವ್ಯವಹಾರ ನಡೆಸುತ್ತಿದ್ದರು.ಆದರೆ ಏಪ್ರಿಲ್ನಲ್ಲಿ ಶ್ರೀಲಂಕಾದ ಈಸ್ಟರ್ ಸಂಡೆ ಬಾಂಬ್ ಸ್ಫೋಟದ ನಂತರ ಎಲ್ಲವೂ ಬದಲಾಗಿದೆ.

ಬಿಬಿಸಿ ಅವರನ್ನು ಉಲ್ಲೇಖಿಸಿ, “ಈಸ್ಟರ್ ಸಂಡೆ ಬಾಂಬ್ ಸ್ಫೋಟದ ನಂತರ,ಸಿಂಹಳೀಯ ಗ್ರಾಹಕರಲ್ಲಿ ಸುಮಾರು 90% ಜನರು ನನ್ನ ಅಂಗಡಿಯಿಂದ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ನನ್ನ ವ್ಯವಹಾರವು ಗಮನಾರ್ಹವಾಗಿ ಕುಸಿದಿದೆ ಮತ್ತು ನಾನು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುತ್ತಿದ್ದೇನೆ. “

ಇಲಿಯಾಸ್ ಮಾತ್ರವಲ್ಲ, ಅನೇಕ ಮುಸ್ಲಿಮರು ಇದೇ ಅಭಿಪ್ರಾಯವನ್ನು ಹೇಳುತ್ತಿದ್ದು, ಬಾಂಬ್ ಸ್ಫೋಟದ ಬಳಿಕ ನಮ್ಮನ್ನು ರಾಕ್ಷಸರಂತೆ ಭಾವಿಸುತ್ತಿದ್ದಾರೆ ಮತ್ತು ಶ್ರೀಲಂಕಾದ ಹಲವಾರು ಭಾಗಗಳಲ್ಲಿ ಮುಸ್ಲಿಂ ಒಡೆತನದ ವ್ಯವಹಾರ ಕೇಂದ್ರ ಮತ್ತು ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ಮೇ ತಿಂಗಳಲ್ಲಿ ಭೀಕರ ಹಿಂಸಾಚಾರ ನಡೆದಿದೆ.

ವರದಿಯ ಪ್ರಕಾರ, ಜೂನ್‌ನಲ್ಲಿ ಹಿರಿಯ ಬೌದ್ಧ ಸನ್ಯಾಸಿಯೊಬ್ಬರು ಸಿಂಹಳೀಯರು ಮುಸ್ಲಿಂ ಅಂಗಡಿಗಳಿಂದ ಖರೀದಿಸದಂತೆ ಬಹಿರಂಗವಾಗಿ ಕರೆ ನೀಡಿದರು. ಆದರೆ, ಈ ಕರೆಯನ್ನು ಹಣಕಾಸು ಸಚಿವ ಮಂಗಳಾ ಸಮರವೀರ ಟೀಕಿಸಿದ್ದರು.

ಶ್ರೀಲಂಕಾದ 22 ಮಿಲಿಯನ್ ಜನರಲ್ಲಿ ಮುಸ್ಲಿಮರು ಸುಮಾರು 10% ರಷ್ಟಿದ್ದರೆ, ಜನಸಂಖ್ಯೆಯ ಸುಮಾರು 12% ಹಿಂದೂಗಳು ಮತ್ತು 7% ಕ್ರಿಶ್ಚಿಯನ್ನರು.

ಈಸ್ಟರ್ ದಿನದಂದು ಏಪ್ರಿಲ್ 21 ರಂದು ಬಾಂಬ್ ದಾಳಿ ನಡೆಸಿದ್ದು 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದ್ವೀಪದಾದ್ಯಂತದ ಮುಸ್ಲಿಮರು ಭಯೋತ್ಪಾದಕ ಕೃತ್ಯಗಳನ್ನು ಖಂಡಿಸಿದ್ದರೂ, ಇದು ಸಿಂಹಳೀಯರ ಕಠಿಣವಾದಿಗಳ ಒಂದು ಭಾಗವನ್ನು ತೃಪ್ತಿಪಡಿಸಿಲ್ಲ.

error: Content is protected !! Not allowed copy content from janadhvani.com