ನವದೆಹಲಿ : ತಾಜ್ಮಹಲ್ ಒಡೆತನಕ್ಕೆ ತನ್ನದೆ ಎಂದು ಹೇಳಿಕೊಂಡು ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ವಿರುದ್ಧ ಹೋರಾಟ ನಡೆಸುತ್ತಿರುವ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ಗೆ ಸುಪ್ರೀಂಕೋರ್ಟ್, ಮೊಘಲ್ ಮಹರಾಜ ಷಹ ಜಹಾನ್ನ ಸಹಿ ಇರುವ ದಾಖಲೆಗಳನ್ನು ನೀಡುವಂತೆ ಮಹತ್ವದ ಆದೇಶ ನೀಡಿದೆ.
‘ತಾಜ್ಮಹಲ್ ವಕ್ಫ್ ಬೋರ್ಡ್ಗೆ ಸೇರಿದ್ದೆಂದು ಹೇಗೆ ನಂಬುವುದು ? ನಿಮಗೆ ಸೇರಿದ್ದೆಂದು ಷಹಜಾನ್ ಬರೆದುಕೊಟ್ಟು ಸಹಿ ಹಾಕಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿ. ಈ ತರಹದ ಹುರುಳಿಲ್ಲದ ಪ್ರಕರಣ ಸುಪ್ರೀಂಕೋರ್ಟ್ನ ಸಮಯ ಹಾಳುಮಾಡುವುದಿಲ್ಲವೇ? ಎಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಬೋರ್ಡ್ಗೆ ಪ್ರಶ್ನೆ ಮಾಡಿದೆ.
ಬೋರ್ಡ್ ಪರವಾಗಿ ವಾದ ಮಾಡಿದ ಹಿರಿಯ ವಕೀಲ ಗಿರಿ ಅವರು ಷಾಹಜಾನ್ ವಕ್ಫ್ ಬೋರ್ಡ್ಗೆ ತಾಜ್ಮಹಲ್ ಒಡೆತನದ ಹಕ್ಕು ನೀಡಿದ್ದಾರೆ ಎಂದು ವಾದಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ರೀತಿ ಆದೇಶ ನೀಡಿ ಒಂದುವಾರದ ಗಡುವು ಕೊಟ್ಟಿದೆ.
ಅಲ್ಲದೆ ಮಿಶ್ರಾ ಅವರು ಬೋರ್ಡ್ಗೆ ಒಂದಷ್ಟು ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ. ಷಹಜಾನ್ ಸಹಿ ಮಾಡಲು ಹೇಗೆ ಸಾಧ್ಯ? ಅಲ್ಲದೆ ಮೊಘಲರಿಂದ 17ನೇ ಶತಮಾನದಲ್ಲಿ ನಿರ್ಮಾಣವಾದ ಸ್ಮಾರಕಗಳು ನಂತರ ಬ್ರಿಟಿಷರಿಗೆ ಸೇರಿದವು. ಸ್ವಾತಂತ್ರ್ಯ ನಂತರ ಇವುಗಳ ನಿರ್ವಹಣೆಯನ್ನು ಎಎಸ್ಐ ಹಾಗೂ ಸರ್ಕಾರಗಳೇ ಹೊತ್ತಿವೆ ಎಂದು ಕೋರ್ಟ್ ಹೇಳಿತು.