janadhvani

Kannada Online News Paper

ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು-ಪ್ರಕಟಣೆ ಹಿಂಪಡೆಯುವಂತೆ ಪ್ರಧಾನಿ ಕಾರ್ಯಾಲಯ ಸೂಚನೆ

ನವದೆಹಲಿ: ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಪಡಿಸುವ ವಿಚಾರವಾಗಿ ಹೊರಡಿಸಿರುವ ಪ್ರಕಟಣೆಯನ್ನು ಪ್ರಧಾನಿ ಕಾರ್ಯಾಲಯದ (ಪಿಎಂಒ) ಸೂಚನೆ ಮೇರೆಗೆ ಹಿಂಪಡೆಯಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ.

ಪ್ರಕಟಣೆಯನ್ನು ಹಿಂಪಡೆಯುವಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿದೆ. ಜತೆಗೆ, ಸುಳ್ಳು ಸುದ್ದಿಯಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಭಾರತೀಯ ಪತ್ರಿಕಾ ಮಂಡಳಿಯಂತಹ (ಪಿಸಿಐ) ಸಂಸ್ಥೆಗಳಿಗೇ ಬಿಟ್ಟುಬಿಡಬೇಕು ಎಂದು ಹೇಳಿದೆ.

ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದುಪಡಿಸುವ ವಿಷಯಕ್ಕೆ ಸಂಬಂಧಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ್ದ ಪ್ರಕಟಣೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ನಿಯಮ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್, ಸಿಪಿಎಂ ಮತ್ತಿತರ ಪ್ರತಿಪಕ್ಷಗಳು ಅಭಿಪ್ರಾಯಪಟ್ಟಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೇಂದ್ರದ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಪ್ರಕಟಣೆ ರದ್ದುಗೊಳಿಸಲು ಪ್ರಧಾನಿ ಕಾರ್ಯಾಲಯ ಸೂಚಿಸಿದೆ.

ಪ್ರಕಟಣೆಯಲ್ಲೇನಿತ್ತು?: ಸುಳ್ಳು ಸುದ್ದಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪ ಸಾಬೀತಾದರೆ, ಮೊದಲ ತಪ್ಪಿಗೆ ಆರು ತಿಂಗಳ ಮಟ್ಟಿಗೆ, ಎರಡನೇ ಬಾರಿಯ ತಪ್ಪಿಗೆ ಒಂದು ವರ್ಷದ ಮಟ್ಟಿಗೆ ಮತ್ತು ಮೂರನೇ ಬಾರಿಗೆ ತಪ್ಪು ಮಾಡಿದಲ್ಲಿ ಶಾಶ್ವತವಾಗಿ ಮಾನ್ಯತೆ ರದ್ದು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿಗೆ (ಪಿಸಿಐ) ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಸುದ್ದಿ ಪ್ರಸಾರಕರ ಸಂಘಟನೆಗೆ (ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್/ಎನ್‌ಬಿಎ) ವಹಿಸಲಾಗುವುದು. ಈ ಸಂಸ್ಥೆಗಳು 15 ದಿನಗಳ ಒಳಗೆ ನಿರ್ಣಯ ಕೈಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ಆರೋಪ ದಾಖಲಾದ ತಕ್ಷಣದಿಂದ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನ್ವಯವಾಗುವಂತೆ ಆರೋಪಿ ಪತ್ರಕರ್ತರ ಮಾನ್ಯತೆಯನ್ನು ಅಮಾನತಿನಲ್ಲಿಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

error: Content is protected !! Not allowed copy content from janadhvani.com