ಬೆಂಗಳೂರು: ಆಸ್ತಿ ತೆರಿಗೆ ಪಾವತಿಸುವವರಿಗೆ ಸಿಹಿ ಸುದ್ದಿ. 2018–19ನೇ ಸಾಲಿನ ಆಸ್ತಿ ತೆರಿಗೆಯನ್ನು ಇದೇ 30ರೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ, ‘ಕೆಎಂಸಿ ಕಾಯ್ದೆಯಲ್ಲಿರುವ ಅವಕಾಶ ಬಳಸಿಕೊಂಡು ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಲಾಗಿದೆ. ತೆರಿಗೆದಾರರು ಇದರ ಪ್ರಯೋಜನ ಪಡೆಯಬೇಕು’ ಎಂದರು.
ಕಳೆದ ವರ್ಷ ಆನ್‌ಲೈನ್ ತಂತ್ರಾಂಶದಲ್ಲಿ ದೋಷವಿದ್ದ ಕಾರಣಕ್ಕೆ ರಿಯಾಯಿತಿ ಅವಧಿಯನ್ನು ಏಪ್ರಿಲ್ 30ರ ನಂತರವೂ ವಿಸ್ತರಿಸಲಾಗಿತ್ತು. ಆದರೆ, ಈ ಬಾರಿ ಅಂತಹ ಯಾವುದೇ ದೋಷಗಳಿಲ್ಲ. ರಿಯಾಯಿತಿ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ 1 ಮತ್ತು 2ರಂದು ಒಟ್ಟು 3,600 ಮಂದಿ ಆನ್‌ಲೈನ್ ಮೂಲಕ ₹2.8 ಕೋಟಿ ಆಸ್ತಿ ತೆರಿಗೆ ಪಾವತಿಸಿದ್ದಾರೆ. 1,200 ಮಂದಿ ಚಲನ್ ಪಡೆದಿದ್ದಾರೆ ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ₹5,000ದವರೆಗೆ ತೆರಿಗೆ ಪಾವತಿಗೆ ಬ್ಯಾಂಕ್‌ನವರು ಯಾವುದೇ ಶುಲ್ಕ ವಿಧಿಸುವುದಿಲ್ಲ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ 0.9ರಷ್ಟು ಶುಲ್ಕ ವಿಧಿಸುತ್ತಾರೆ ಎಂದರು.
ಆಸ್ತಿ ತೆರಿಗೆಯನ್ನು ಮೂರು ನಮೂನೆಗಳಲ್ಲಿ ಪಾವತಿಸಬಹುದು. ಹಳೇ ಪಿಐಡಿ ಸಂಖ್ಯೆ (ಆಸ್ತಿ ಗುರುತಿನ ಸಂಖ್ಯೆ) ಹೊಂದಿರುವ ಆಸ್ತಿಗಳಿಗೆ ನಮೂನೆ 1ರಲ್ಲಿ, ಹೊಸ ಪ್ರದೇಶಗಳ ಎ ಖಾತಾ ಹೊಂದಿರುವ ಆಸ್ತಿಗಳಿಗೆ ನಮೂನೆ 2ರಲ್ಲಿ ಹಾಗೂ ಎ ಖಾತಾ ಆಗದೇ ಇರುವ ಆದರೆ, ಭೂಪರಿವರ್ತನೆ ಆಗಿರುವ ಆಸ್ತಿಗಳಿಗೆ ನಮೂನೆ 3ರಲ್ಲಿ ತೆರಿಗೆ ಪಾವತಿಸಬಹುದು. ವಸತಿ ಉದ್ದೇಶದ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ, ವಾಣಿಜ್ಯ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಬದಲಾವಣೆ ಮಾಡಲು ನಮೂನೆ 4 ಬಳಸಬಹುದು ಎಂದರು.
ಈ ಬಾರಿ ನಮೂನೆ–5 ಅನ್ನು ಪರಿಚಯಿಸಲಾಗುತ್ತಿದೆ. ಸಂಘ–ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ವಿಧಿಸುತ್ತಿರುವ ಸೇವಾ ಶುಲ್ಕಕ್ಕೆ ಸಂಬಂಧಿಸಿದ ಬದಲಾವಣೆಗಳನ್ನು ಈ ನಮೂನೆ ಬಳಸಿ ಆನ್‌ಲೈನ್ ಮೂಲಕವೇ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
₹2,178 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಬಿಬಿಎಂಪಿ ಕಂದಾಯ ಇಲಾಖೆಗೆ 2017–18ನೇ ಸಾಲಿನಲ್ಲಿ ₹2,177.83 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ₹2,600 ಕೋಟಿ ತೆರಿಗೆ ಸಂಗ್ರಹದ ಗುರಿ ಇತ್ತು. ಇನ್ನೂ ₹11.70 ಕೋಟಿ ಆಸ್ತಿ ತೆರಿಗೆಯನ್ನು ಆರ್ಥಿಕ ವರ್ಷದ ಕೊನೆಯ ದಿನಗಳಲ್ಲಿ ಪಾವತಿಸಿದ್ದು, ಈ ಮೊತ್ತವು ನಗದೀಕರಣಗೊಳ್ಳಬೇಕಿದೆ ಎಂದು ವೆಂಕಟಾಚಲಪತಿ ತಿಳಿಸಿದರು.
14.37 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಆನ್‌ಲೈನ್ ಮೂಲಕ ತೆರಿಗೆಯನ್ನು ಸುಲಭವಾಗಿ ಪಾವತಿಸಲು ಸುಧಾರಿತ ತಂತ್ರಾಂಶವನ್ನು ಅಳವಡಿಸಲಾಗಿದೆ. ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಎಲ್ಲ ಶಾಖೆಗಳಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು. ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆದು, ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತೆರಿಗೆ ಪಾವತಿಸದೇ ಇರುವವರಿಗೆ ತೆರಿಗೆ ಮೊತ್ತದ ಶೇ 2ರಷ್ಟು ದಂಡವನ್ನು ಪ್ರತಿ ತಿಂಗಳು ವಿಧಿಸಲಾಗುತ್ತದೆ. ತೆರಿಗೆದಾರರು ಆಸ್ತಿಗಳ ಸರಿಯಾದ ಮಾಹಿತಿಯನ್ನು ಘೋಷಿಸಬೇಕು. ತಪ್ಪು ಮಾಹಿತಿ ನೀಡಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.