janadhvani

Kannada Online News Paper

ಕೊಲ್ಲಿ ರಾಷ್ಟ್ರಗಳ ಪ್ರಯಾಣ ನಿಷೇಧ: ತೆರವುಗೊಳಿಸಲು ಭಾರತದಿಂದ ತೀವ್ರ ಒತ್ತಡ

ನವದೆಹಲಿ: ಕೊಲ್ಲಿ ರಾಷ್ಟ್ರಗಳ ಮೇಲಿನ ಪ್ರಯಾಣ ನಿಷೇಧವನ್ನು ತೆಗೆದುಹಾಕಲು ಭಾರತ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಿದೆ.

ದೇಶದಲ್ಲಿ ಕೋವಿಡ್ ಹರಡುವಿಕೆ ಇಳಿಕೆಯಾಗಿರುವ ಪರಿಸ್ಥಿತಿಯನ್ನು ಕೊಲ್ಲಿ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವಂತೆ ಕೇಂದ್ರ ವಿದೇಶಾಂಗ ಸಚಿವಾಲಯ ರಾಯಭಾರಿಗಳಿಗೆ ನಿರ್ದೇಶನ ನೀಡಿದೆ. ಲಸಿಕೆ ಹಾಕಿದ ವಲಸಿಗರಿಗೆ ಕೂಡಲೇ ಕೊಲ್ಲಿಗೆ ಮರಳಲು ಅವಕಾಶ ನೀಡಬೇಕೆಂದು ಭಾರತ ಒತ್ತಾಯಿಸುತ್ತಿದೆ.

ಕೊಲ್ಲಿ ರಾಷ್ಟ್ರಗಳ ಉಸ್ತುವಾರಿ ಹೊಂದಿರುವ, ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಮುರಲೀಧರನ್ ಅವರು ಭಾರತೀಯ ರಾಯಭಾರಿಗಳ ಸಭೆಯನ್ನು ಆನ್‌ಲೈನ್‌ನಲ್ಲಿ ಕರೆದು ಈ ವಿಷಯ ತಿಳಿಸಿದರು. ಹಲವು ತಿಂಗಳುಗಳ ಪ್ರಯಾಣ ನಿಷೇಧದ ಸಂದರ್ಭದಲ್ಲಿ ಕೇಂದ್ರದಿಂದ ಯಾವುದೇ ಒತ್ತಡವಿಲ್ಲ ಎಂದು ಆರೋಪಗಳು ಕೇಳಿಬಂದಿತ್ತು.

ಆದಷ್ಟು ಬೇಗ ಆಯಾ ಕೊಲ್ಲಿ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರ ಸರ್ಕಾರ ರಾಯಭಾರಿಗಳಿಗೆ ಸೂಚಿಸಿದೆ. ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಶಿ ಅವರು, ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣ ನಿಷೇಧವನ್ನು ತೆಗೆದುಹಾಕುವಂತೆ ಮನವೊಲಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಅವರ ನೇತೃತ್ವದಲ್ಲಿ ವಿದೇಶಗಳೊಂದಿಗೆ ಚರ್ಚೆಯನ್ನು ಮುಂದುವರಿಸುವುದಾಗಿ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಭಾರತದಿಂದ ವಿಮಾನ ಹಾರಾಟವನ್ನು ಯುಎಇಯಲ್ಲಿ ಏಪ್ರಿಲ್ 25 ರಿಂದ ನಿಷೇಧಿಸಲಾಗಿದೆ. ಕತಾರ್ ಹೊರತುಪಡಿಸಿ ಎಲ್ಲಾ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ವಿಮಾನಗಳನ್ನು ತಿಂಗಳುಗಟ್ಟಲೆ ನಿಷೇಧಿಸಲಾಗಿದೆ. ಶೀಘ್ರದಲ್ಲೇ ನಿಷೇಧವನ್ನು ತೆಗೆದುಹಾಕುವ ಆಶಯವನ್ನು ಕೇಂದ್ರ ವಿದೇಶಾಂಗ ಸಚಿವಾಲಯವು ಹೊಂದಿದೆ.

ಪ್ರಯಾಣ ನಿಷೇಧದ ಬಿಕ್ಕಟ್ಟಿನ ಬಗ್ಗೆ ಗಲ್ಫ್‌ನ ಭಾರತೀಯ ರಾಯಭಾರಿಗಳು ಚರ್ಚಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ತಿಂಗಳು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್ ಜಯಶಂಕರ್ ಅವರ ಕುವೈತ್ ಭೇಟಿಯ ಸಂದರ್ಭದಲ್ಲಿ ಗಲ್ಫ್ ರಾಯಭಾರಿಗಳು ಪ್ರಯಾಣ ನಿಷೇಧದ ಬಗ್ಗೆ ಚರ್ಚಿಸಿದ್ದರು.

error: Content is protected !! Not allowed copy content from janadhvani.com