janadhvani

Kannada Online News Paper

ವೃದ್ಧ ವ್ಯಕ್ತಿಗೆ ಹಲ್ಲೆ: ಸಮಾಜ ಮತ್ತು ಧರ್ಮಕ್ಕೆ ಕಳಂಕ – ರಾಹುಲ್ ಗಾಂಧಿ

ನವದೆಹಲಿ,ಜೂನ್.15: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲವು ರಾಮ ಭಕ್ತರು,ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಮುಸ್ಲೀಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಥಳಿಸಿದ್ದರು. ಅಲ್ಲದೆ,ಅವರ ಗಡ್ಡವನ್ನು ಕತ್ತರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಜೂನ್ 5ರಂದು ಅಬ್ದುಲ್ ಸಮದ್ ಎಂಬ ಹಿರಿಯ ವ್ಯಕ್ತಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅವರ ಮೇಲೆ ಕೆಲವು ಕ್ರೂರಿಗಳು ದಾಳಿ ನಡೆಸಿ, ಅವರನ್ನು ಎಳೆದುಕೊಂಡ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಕಿಡಿಗೇಡಿಗಳು ಅವರಿಗೆ ಜೈ ಶ್ರೀರಾಮ್ , ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಹೊಡೆದಿದ್ದಾರೆ. ಅಲ್ಲದೇ ಮರದ ಕಟ್ಟಿಗೆಯಿಂದ ಮನಬಂದಂತೆ ಥಳಿಸಿದ್ದರು.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮದ್, ತಮ್ಮನ್ನು ಬಿಟ್ಟು ಬಿಡುವಂತೆ ಯುವಕರಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಅವರನ್ನು ಹಿಂಸಿಸಲಾಗಿದೆ.

ಈ ಘಟನೆಯನ್ನು ಅನೇಕ ರಾಷ್ಟ್ರೀಯ ನಾಯಕರು ಖಂಡಿಸಿದ್ದರು. ಅಸದುದ್ದೀನ್ ಓವೈಸಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, “ಮುಸ್ಲಿಮ್ ವ್ಯಕ್ತಿಯ ಮೇಲೆ ಹೀಗೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಸಮಾಜ ಮತ್ತು ಧರ್ಮಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಒಬ್ಬ ವಯಸ್ಸಾದ ವ್ಯಕ್ತಿಯನ್ನು ವಿನಾ ಕಾರಣ ಥಳಿಸುವುದು ಅತ್ಯಂತ ಅಮಾನವೀಯ. ಮುಸ್ಲೀಂ ವೃದ್ಧರನ್ನು ರಾಮನಾಮ ಜಪಿಸುವಂತೆ ಒತ್ತಾಯಿಸುತ್ತಿರುವ ವ್ಯಕ್ತಿ ನಿಜವಾದ ರಾಮ ಭಕ್ತನಾಗಿರಲು ಸಾಧ್ಯವಿಲ್ಲ. ಇಂತಹ ಕ್ರೌರ್ಯಗಳು ಮಾನವೀಯತೆಯನ್ನು ಇಲ್ಲದಂತೆ ಮಾಡುತ್ತವೆ. ಧರ್ಮದ ಕಾರಣಕ್ಕೆ ನಡೆದ ಈ ದೌರ್ಜನ್ಯ ಸಮಾಜ ಮತ್ತು ಧರ್ಮ ಎರಡಕ್ಕೂ ದೊಡ್ಡ ಕಳಂಕ” ಎಂದು ಕಿಡಿಕಾರಿದ್ದಾರೆ.

error: Content is protected !! Not allowed copy content from janadhvani.com