janadhvani

Kannada Online News Paper

CAA: ಕೇಂದ್ರದ ಅಫಿಡವಿಟ್ಗೆ ಪ್ರತಿಕ್ರಿಯಿಸಲು ಮುಸ್ಲಿಂ ಲೀಗ್ ಗೆ 2 ವಾರಗಳ ಗಡುವು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ,ಜೂನ್.15:ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಗುಜರಾತ್, ರಾಜಸ್ಥಾನ್, ಹರಿಯಾಣ, ಪಂಜಾಬ್, ಛತ್ತಿಸ್‌ಗಡ್‌ನಲ್ಲಿ ರುವ ಅಪಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಮೂಲದ ಮುಸ್ಲೀಮೇತರರಿಗೆ ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಿದೆ. ಆ ಸಂಬಂಧ ಸದ್ಯ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.

ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಸಾಕಷ್ಟು ಚರ್ಚೆ ಮತ್ತು ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಸಿಎಎ ಕಾಯ್ದೆ (ಪೌರತ್ವ ತಿದ್ದುಪಡಿ ಕಾಯ್ದೆ) ಯನ್ನು ಅಧಿಕೃತವಾಗಿ ದೇಶದಲ್ಲಿ ಜಾರಿಗೊಳಿಸುವುದರ ಭಾಗವಾಗಿದೆ ಇದು ಎಂದು ಕೇಂದ್ರದ ಅಧಿಸೂಚನೆ ಯನ್ನು ಪ್ರಶ್ನಿಸಿ ಅನೇಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಹೀಗಾಗಿ ಇಂದು ಸಿಎಎ ಕಾಯ್ದೆಗೆ ಸಂಬಂಧಿಸಿ ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತು. ಅಲ್ಲದೆ, ಮಾನವ ಸಂಪನ್ಮೂಲ ಇಲಾಖೆಯ ಅಫಿಡವಿಟ್ಗೆ ಎರಡು ವಾರದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.

ಅರ್ಜಿದಾರರ ಪರವಾಗಿ ಕಪಿಲ್ ಸಿಬಲ್ ಇಂದು ನ್ಯಾಯಾಲಯದಲ್ಲಿ ಹಾಜರಿದ್ದರು. ಕೇಂದ್ರ ಸರ್ಕಾರ ಈ ಅಧಿಸೂಚನೆ CAA ಗೆ ಸಂಬಂಧಿಸಿದ್ದಲ್ಲ. ಕೇಂದ್ರ ಸರ್ಕಾರದ ಅಂತರ್ಗತ ಅಧಿಕಾರವನ್ನು ಬಳಸಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಿಎಎ ಮತ್ತು ಅಧಿಸೂಚನೆಗೆ ಸಂಬಂಧ ಕಲ್ಪಿಸಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ದೋಷಪೂರಿತವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನಿನ್ನೆ ಸೋಮವಾರ ಅಫಿಡೆವಿಟ್ ಸಲ್ಲಿಸಿತ್ತು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ತಮಗೆ ಉತ್ತರಿಸಲು 2 ವಾರದ ಕಾಲಾವಕಾಶವನ್ನು ಕೇಳಿದ್ದಾರೆ. ಅರ್ಜಿದಾರರ ಮನವಿಗೆ ಸ್ಪಂದಿಸಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು 2 ವಾರಗಳ ನಂತರ ಆರಂಭಿಸುವುದಾಗಿ ಹೇಳಿದೆ.

ನ್ಯಾಯಮೂರ್ತಿಗಳಾದ ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಜಸ್ಟಿಸ್ ವಿ. ರಾಮಸುಬ್ರಮಣ್ಯನ್ ಅವರ ಪೀಠವು 2 ವಾರಗಳ ನಂತರ ಕೇಂದ್ರ ಸರ್ಕಾರದ ಪೌರತ್ವ ನೊಂದಣಿ ಅಧಿಸೂಚನೆಯ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಲಿದೆ.

ಇದಕ್ಕು ಮೊದಲು ಕೇಂದ್ರ ಸರ್ಕಾರವು 2004, 2005, 2006, 2016, 2018 ರಲ್ಲಿ ಇಂತಹುದೇ ಅಧಿಸೂಚನೆಯನ್ನು ದೇಶದಲ್ಲಿ ಸರ್ಕಾರವು ಹೊರಡಿಸಿದೆ. 1955 ರ ಸಿಟಿಜನ್‌ಶಿಪ್ ಕಾಯ್ದೆಯ ನಿಯಮಗಳಡಿಯಲ್ಲಿಯೇ ಈ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಪೌರತ್ವದ ಅರ್ಹತೆಯ ಮಾನದಂಡಗಳನ್ನು ಸಡಿಲಿಸಲಾಗಿಲ್ಲ. ಹೊಸ ನಿಯಮಗಳನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಹೇಳಿದೆ.

ಕೇಂದ್ರ ಸರ್ಕಾರವು ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ವಿರುದ್ಧದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸಿಎಎ ನಿಯಮಾವಳಿಗಳು ಇದುವರೆಗೆ ರೂಪಿಸಲಾಗಿಲ್ಲ. ಹಾಗಾಗಿ ಸಿಎಎ ಜಾರಿ ಸದ್ಯಕ್ಕಿಲ್ಲವೆಂದು ಹೇಳಿದೆ. ಆದರೆ ಸದ್ದಿಲ್ಲದೇ ಸರ್ಕಾರ ಪೌರತ್ವ ನೀಡಲು ಅರ್ಜಿ ಕರೆದಿದೆ ಎಂದು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಇಂಡಿಯನ್ ಯೂನಿಯನ್ ಆಫ್ ಮುಸ್ಲೀಂ ಲೀಗ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸದ್ಯ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2 ವಾರಗಳ ನಂತರ ಆರಂಭಿಸಲಿದೆ.

ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಸಿಎಎ, ಎನ್‌ಆರ್‌ಸಿ ಯೋಜನೆಗಳ ಜಾರಿ ಇದುವರೆಗೆ ಆರಂಭವಾಗಿಲ್ಲ ಎಂದು ಹೇಳಿಕೊಂಡು ಬರುತ್ತಿದೆ. ಆದರೆ ಸರ್ಕಾರ ಹಿಂಬಾಗಿಲ ಮೂಲಕ ಸದ್ದಿಲ್ಲದೇ CAA ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ದೇಶದ ಅನೇಕ ಸಂಘಟನೆಗಳು ಮತ್ತು ಹೋರಾಟಗಾರರು ದೂರುತ್ತಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸುತ್ತಿದೆಯೋ ಅಥವಾ ಇಲ್ಲವೋ ಎಂಬುದು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾದಾಗಲೇ ತಿಳಿದು ಬರಲಿದೆ.

error: Content is protected !! Not allowed copy content from janadhvani.com