ಬೆಂಗಳೂರು: ಲಾಕ್‌ಡೌನ್ ಜಾರಿಗೊಳಿಸುವಾಗ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿಚಾರ್ಜ್ ಮಾಡುವುದು ಸೂಕ್ತವಲ್ಲ. ಕರ್ತವ್ಯದ ವೇಳೆ ಪೊಲೀಸರು ಸಮತೋಲನ ತಪ್ಪಬಾರದು.
ಇಂತಹ ಘಟನೆಗಳಾಗದಂತೆ ಎಚ್ಚರವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಲಾಕ್ಡೌನ್ ಜಾರಿ ಮಾಡುವಾಗ ಸಾರ್ವಜನಿಕರ ಮೇಲೆ ಲಾಠಿ ಬಳಸದೇ ಪೊಲೀಸರು ಸಂಯಮದಿಂದ ವರ್ತಿಸಬೇಕು. ಕೆಲವೆಡೆ ಕೊವಿಡ್ ಸೋಂಕಿತರಿಗೂ ಲಾಠಿಚಾರ್ಜ್ ಮಾಡಿದ ವರದಿಯಿದೆ. ಪೊಲೀಸರು ಸಾರ್ವಜನಿಕರ ಮೇಲೆ ಇಂತಹ ವರ್ತನೆ ಪ್ರದರ್ಶಿಸಬಾರದು ಎಂದ ಕೋರ್ಟ್, ಸಂಯಮ ಪ್ರದರ್ಶಿಸಲು ಪೊಲೀಸರಿಗೆ ಸೂಚನೆ ನೀಡಿದೆ. ಜತೆಗೆ ಪೊಲೀಸರಿಗೆ ಸೂಕ್ತ ಮಾರ್ಗಸೂಚಿ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇಂದು ವಿವಿಧ ವಿಷಯಗಳನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ರಾಜ್ಯದಲ್ಲಿ ಸಂಪೂರ್ಣ ವ್ಯಾಕ್ಸಿನೇಷನ್‌ಗೆ ನೀಲನಕ್ಷೆ ರೂಪಿಸುವಂತೆ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. 2ನೇ ಲಸಿಕೆ ಡೋಸ್ ಕೊರತೆ ಗಂಭೀರ ಪರಿಸ್ಥಿತಿ ಸೃಷ್ಟಿಸಿದೆ. ರಾಜ್ಯ, ಕೇಂದ್ರ ಸರ್ಕಾರಗಳು ತಕ್ಷಣ ಕ್ರಮಕೈಗೊಳ್ಳಬೇಕು. ವ್ಯಾಕ್ಸಿನ್ ಕೊರತೆಯ ಸಮಸ್ಯೆ ಬಗೆಹರಿಸಬೇಕು. ಸದ್ಯ 26 ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ಒದಗಿಸಬೇಕು. ಕೈಗೊಂಡ ಕ್ರಮದ ಬಗ್ಗೆ ಮೇ 13ರಂದು ಉತ್ತರಿಸಿ ಎಂದು ಹೈಕೋರ್ಟ್ನ ವಿಭಾಗೀಯ ಪೀಠ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2ನೇ ಡೋಸ್ ವ್ಯಾಕ್ಸಿನ್ ಪಡೆಯಬೇಕಾದ 26 ಲಕ್ಷ ಜನರಿಗೆ ವ್ಯಾಕ್ಸಿನ್ ಸಿಕ್ತಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿದ ಅಂಕಿ ಅಂಶ ಪರಿಶೀಲಿಸಿದ ಹೈಕೋರ್ಟ್ ರಾಜ್ಯದಲ್ಲಿ ತಕ್ಷಣಕ್ಕೆ 26 ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ನೀಡಬೇಕಿದೆ. ಹೀಗಾಗಿ ಲಸಿಕೆ ಪೂರೈಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 1ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದ 28 ದಿನಗಳಲ್ಲಿ 2ನೇ ಡೋಸ್ ಲಸಿಕೆ ಪಡೆಯಬೇಕಿದೆ. 1ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ 4 ರಿಂ 6 ವಾರಗಳೊಳಗೆ 2ನೇ ಡೋಸ್ ಪಡೆಯಬೇಕಿದೆ. ಆದರೆ ಸದ್ಯಕ್ಕೆ 26 ಲಕ್ಷ ಜನರಿಗೆ ನಿಗದಿತ ಅವಧಿಯೊಳಗೆ ಲಸಿಕೆ ಹಾಕಲು ಸಾಧ್ಯವಾಗದ ಬಗ್ಗೆ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
18 ರಿಂದ 44 ವರ್ಷದೊಳಗಿನವರ ವ್ಯಾಕ್ಸಿನೇಷನ್ ಗೆ ಮುಂದಾಗಿರುವ ಸರ್ಕಾರಕ್ಕೆ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಲು ಸಾಧ್ಯವಾಗಿಲ್ಲ. 1ನೇ ಡೋಸ್ ಪಡೆದ 65 ಲಕ್ಷ ಜನರಿಗೆ 2ನೇ ಡೋಸ್ ಲಸಿಕೆ ಹಾಕಬೇಕಿದೆ. ಈ ಪೈಕಿ 26 ಲಕ್ಷ ಜನರಿಗೆ ತಕ್ಷಣ ವ್ಯಾಕ್ಸಿನೇಷನ್ ಅಗತ್ಯವಿದೆ. ಆದ್ರೆ ಸದ್ಯಕ್ಕೆ ಸರ್ಕಾರದ ಬಳಿ ಕೇವಲ 9.32 ಲಕ್ಷ ಡೋಸ್ ಮಾತ್ರ ಉಳಿದಿದ್ದು ಗಂಭೀರ ಪರಿಸ್ಥಿತಿಯಿದೆ. ಹೀಗಾಗಿ ತಕ್ಷಣಕ್ಕೆ ವ್ಯಾಕ್ಸಿನ್ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮೇ 13 ರೊಳಗೆ ಕೈಗೊಂಡ ಕ್ರಮದ ಮಾಹಿತಿ ನೀಡಬೇಕು. ರಾಜ್ಯ ಸರ್ಕಾರ ಸಂಪೂರ್ಣ ವ್ಯಾಕ್ಸಿನೇಷನ್ ಗೆ ನೀಲನಕ್ಷೆ ರೂಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ರವರಿದ್ದ ವಿಭಾಗೀಯ ಪೀಠ ಆದೇಶ ನೀಡಿದೆ.
2ನೇ ಡೋಸ್ ಪಡೆಯಲು ವಿಳಂಬವಾದರೆ 1ನೇ ಡೋಸ್ ನಿಷ್ಕ್ರಿಯವಾಗುವುದಿಲ್ಲ. ಈ ಬಗ್ಗೆ ವೈಜ್ಞಾನಿಕ ಆಧಾರಗಳಿಲ್ಲ. ಕೋವಿಡ್ ನಿಂದ ಗುಣಮುಖರಾದವರಿಗೆ ಒಂದೇ ಡೋಸ್ ವ್ಯಾಕ್ಸಿನ್ ಸಾಕೆಂಬ ವರದಿ ಇದೆ. ಆದರೂ ಲಸಿಕೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಎಜಿ ಹೈಕೋರ್ಟ್ ಗೆ ವಿವರಣೆ ನೀಡಿದರು. ಇನ್ನು ಲಾಕ್‌ಡೌನ್ ನಿಂದ ತೊಂದರೆಗೊಳಗಾಗಿರುವ ಬಡವರಿಗೆ ಆಹಾರ ಭದ್ರತೆ ಒದಗಿಸುವಂತೆ ಹೈಕೋರ್ಟ್ ನೀಡಿದ್ದ ಸೂಚನೆಯಂತೆ ಕೈಗೊಂಡ ಕ್ರಮದ ಮಾಹಿತಿಯನ್ನು ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿದೆ.