ಕೌಲಾಲಂಪುರ್ | ಭಾರತೀಯ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಸ್ವಹೀಹ್ ಅಲ್-ಬುಖಾರಿ ವ್ಯಾಖ್ಯಾನದ ಮೊದಲ ಸಂಪುಟ ‘ತದ್ಕೀರುಲ್ ಖಾರಿ’ ಬಿಡುಗಡೆ ಮಾಡಲಾಯಿತು. ಮಲೇಷ್ಯಾದ ಆಡಳಿತ ರಾಜಧಾನಿ ಪುತ್ರಜಯದಲ್ಲಿರುವ ಮಸ್ಟಿದ್ ಪುತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ವಹೀಹ್ ಅಲ್-ಬುಖಾರಿ ಪಠಣ ಸಮ್ಮೇಳನದ ಸಮಾರೋಪ ಸಭೆಯಲ್ಲಿ ಪ್ರಧಾನಿ ಅನ್ವರ್ ಇಬ್ರಾಹಿಂ ಅವರಿಗೆ ಹಸ್ತಾಂತರಿಸುವ ಮೂಲಕ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಹದೀಸ್ ವಿದ್ವಾಂಸರಾಗಿ, ಶೈಖ್ ಅಬೂಬಕರ್ ಅಹ್ಮದ್ ಅವರ ಆಳವಾದ ಕಲಿಕೆ, ಬೋಧನೆ ಮತ್ತು ತೊಡಗಿಸಿಕೊಳ್ಳುವಿಕೆಗಳು ಇಸ್ಲಾಮಿಕ್ ಪಾಂಡಿತ್ಯದ ಜಗತ್ತಿಗೆ ಹೆಚ್ಚು ಮೌಲ್ಯಯುತ ಕೊಡುಗೆಗಳಾಗಿವೆ ಎಂದು ಮಲೇಷ್ಯಾ ಪ್ರಧಾನಿ ಹೇಳಿದರು.ಈ ದೇಶಕ್ಕೆ ಒಳ್ಳೆಯದಾಗಲಿದೆ ಎಂಬ ನಂಬಿಕೆಯಿಂದಾಗಿ ಸ್ವಹೀಹುಲ್ ಬುಖಾರಿ ಪಾರಾಯಣ ಕೂಟಗಳನ್ನು ಇಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ, ವಿಶ್ವವಿಖ್ಯಾತ ವಿದ್ವಾಂಸರು ಸಭಿಕರನ್ನು ಮುನ್ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
20 ಸಂಪುಟಗಳಲ್ಲಿ ಬಿಡುಗಡೆಯಾಗಲಿರುವ ಗ್ರಂಥದ ಯೋಜನೆಯನ್ನೂ ಸಮಾರಂಭದಲ್ಲಿ ಪ್ರಕಟಿಸಲಾಯಿತು. ಎಲ್ಲಾ ಇಪ್ಪತ್ತು ಸಂಪುಟಗಳ ಮುಖಪುಟಗಳನ್ನು ಇಪ್ಪತ್ತು ವಿಶ್ವಪ್ರಸಿದ್ಧ ವಿದ್ವಾಂಸರು ಬಿಡುಗಡೆ ಮಾಡಿದರು.
ಸ್ವಹೀಹ್ ಅಲ್-ಬುಖಾರಿ ಬೋಧನಾ ಅವಧಿಯಲ್ಲಿನ ತನ್ನ ಅಧ್ಯಯನಗಳು, ಗ್ರಹಿಕೆಗಳು, ಚರ್ಚೆಗಳನ್ನು ಆಧರಿಸಿ, ವಿವಿಧ ವ್ಯಾಖ್ಯಾನ ಗ್ರಂಥಗಳು ಮತ್ತು ವಿದ್ವಾಂಸರನ್ನು ಉಲ್ಲೇಖಿಸಿ ಈ ಗ್ರಂಥವನ್ನು ರಚಿಸಲಾಗಿದೆ. ಸಂಗಮದಲ್ಲಿ ವಿವಿಧ ವಿದ್ವಾಂಸರ ಸನದ್‌ಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಉಪಪ್ರಧಾನಿಗಳಾದ ಅಹ್ಮದ್ ಝಾಹಿದ್ ಬಿನ್ ಹಾಮಿದಿ, ಫಾದಿಲ್ಲಾ ಬಿನ್ ಯೂಸುಫ್, ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಯೀಮ್ ಬಿನ್ ಮುಖ್ತಾರ್, ಮಲೇಷಿಯಾದ ಮುಪ್ತಿ ಡಾ. ಲುಕ್ಮಾನ್ ಬಿನ್ ಅಬ್ದುಲ್ಲಾ, ವಿವಿಧ ದೇಶಗಳ ವಿದ್ವಾಂಸರಾದ ಶೈಖ್ ಮುಹಮ್ಮದ್ ಅಬ್ದುಲ್ ಹುದಾ ಅಲ್ ಯಅ್ ಖೂಬಿ ಸಿರಿಯಾ, ಅಲ್ ಹಬೀಬ್ ಉಮರ್ ಜಲ್ಲಾನಿ ಮಲೇಷ್ಯಾ, ಶೈಖ್ ಅಫೀಫುದ್ದೀನ್ ಜೀಲಾನಿ ಬಾಗ್ದಾದ್, ಡಾ. ಜಮಾಲ್ ಫಾರೂಕ್ ಈಜಿಪ್ಟ್, ಶೈಖ್ ಇಸ್ಮಾಯಿಲ್ ಮುಹಮ್ಮದ್ ಸ್ವಾದಿಕ್ ಉಸ್ಬೆಸ್ಕಿಸ್ತಾನ್, ಅಲಿ ಝೈನುಲ್ ಆಬಿದೀನ್ ಬಿನ್ ಅಬೂ ಬಕರ್ ಹಾಮಿದ್ ಮುಂತಾದವರು ಭಾಗವಹಿಸಿದ್ದರು. ಮರ್ಕಝ್ ನಾಲೆಡ್ಜ್ ಸಿಟಿಯ ಮಲೈಬಾರ್ ಪ್ರೆಸ್ ಈ ಗ್ರಂಥವನ್ನು ಪ್ರಕಟಿಸಿದೆ.