janadhvani

Kannada Online News Paper

ಚಳಿಗಾಲ ಬಳಿಕ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಂತೆ- ಹೌದೇ?

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ತೈಲ ಬೆಲೆ ಗ್ರಾಹಕರ ಜೇಬು ಖಾಲಿ ಮಾಡುತ್ತಿದೆ. ಜಾಗತಿಕ ಕಚ್ಚಾ ತೈಲದ ಸರಾಸರಿ ಬೆಲೆ ಬ್ಯಾರೆಲ್‌ಗೆ 60 ಡಾಲರ್ ನಷ್ಟಿದೆ. ಲಾಕ್ ಡೌನ್ ತೆರವಾದ ಬಳಿಕ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿರುವ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಮುಖಿಯಾಗಿವೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪರಿಣಾಮ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದೆ. ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಜನರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಗ್ರಾಹಕರ ಮೇಲಿನ ಒತ್ತಡ ಕಡಿಮೆ ಮಾಡಲು ಕೇಂದ್ರವು ಇಂಧನ ತೆರಿಗೆಯ ಮೇಲೆ ಲೀಟರ್‌ಗೆ 5 ರೂ.ಗಳಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಆಫ್ ಅಮೆರಿಕ(ಬೋಫಾ)ದ ವಿಶ್ಲೇಷಕರು ತಿಳಿಸಿದ್ದಾರೆ.

‘ನಾವು 2022ರ ಆರ್ಥಿಕ ಹಣಕಾಸು ವರ್ಷದಲ್ಲಿ ಕೇಂದ್ರದ ಹಣಕಾಸಿನ ಕೊರತೆ ನೀಗಿಸಲು ಜಿಡಿಪಿಯ ಶೇ.7.5ಕ್ಕೆ ನಮ್ಮ 30 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದ್ದೇವೆ. ಪ್ರತಿ ಲೀಟರ್‌ಗೆ 5 ರೂ. ತೆರಿಗೆ ಕಡಿತವಾಗುವುದನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಬೋಫಾ ವಿಶ್ಲೇಷಕರು ಹೇಳಿದ್ದಾರೆ. ಪ್ರತಿ ಲೀಟರ್‌ಗೆ 5 ರೂ. ತೈಲ ತೆರಿಗೆ ಕಡಿತದಿಂದ ಕೇಂದ್ರದ ಬೊಕ್ಕಸಕ್ಕೆ ಸುಮಾರು 71,760 ಕೋಟಿ ರೂ. ಹೆಚ್ಚುವರಿ ಹೊರೆಯಾಗುತ್ತದೆ ಎಂದಿದ್ದಾರೆ.

ಭಾರತದಲ್ಲಿ ಕಚ್ಚಾತೈಲದ ಬೆಲೆ ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 62 ಡಾಲರ್ ಆಗಿದೆ. ಡಿಸೆಂಬರ್ ಮಧ್ಯದಲ್ಲಿ ಬ್ಯಾರೆಲ್‌ಗೆ 50 ಡಾಲರ್ ಇದ್ದದ್ದು ಇದೀಗ ಹೆಚ್ಚಾಗಿದೆ. ಜಾಗತಿಕ ಬೇಡಿಕೆ ಪೂರೈಸುವ ಮತ್ತು ಪ್ರಮುಖ ತೈಲ ರಫ್ತು ರಾಷ್ಟ್ರಗಳಿಂದ ಸ್ವಯಂಪ್ರೇರಿತ ಉತ್ಪಾದನಾ ಕಡಿತದ ಪರಿಣಾಮ ತೈಲಬೆಲೆಯಲ್ಲಿ ಏರಿಕೆಯಾಗುತ್ತಿದೆ. 2021ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 19 ರಿಂದ 44 ಡಾಲರ್ ನಷ್ಟಿತ್ತು. ಕಚ್ಚಾ ಆಮದು ಬಿಲ್ ವಾರ್ಷಿಕವಾಗಿ ಶೇ.57ರಷ್ಟು ಇಳಿದು 22.5 ಬಿಲಿಯನ್‌ ಡಾಲರ್ ಗೆ ತಲುಪಿತು.

ತೈಲ ತೆರಿಗೆ ಕಡಿತದಿಂದ ಬಳಕೆಗೆ ಉತ್ತೇಜನ ನೀಡುವ ಮೂಲಕ 2022ರ ಆರ್ಥಿಕ ವರ್ಷದಲ್ಲಿ ಶೇ.9ರಷ್ಟು ಬೆಳವಣಿಗೆಯ ಮುನ್ಸೂಚನೆಯನ್ನು ನಾವು ಹೊಂದಿದ್ದೇವೆ. ಹೆಚ್ಚಿನ ಹಣಕಾಸಿನ ಕೊರತೆಯಿಂದ ಇಳುವರಿಯ ಮೇಲಿನ ಒತ್ತಡದ ಪರಿಣಾಮವನ್ನು ಸರಿದೂಗಿಸಬಹುದು’ ಎಂದು ಬೋಫಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬ್ರೋಕರೇಜ್ ಸಂಸ್ಥೆಯು ತನ್ನ ಆರ್‌ಬಿಐ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಯ ಮುನ್ಸೂಚನೆಯನ್ನು 9 ಬಿಲಿಯನ್ ಡಾಲರ್ ನಿಂದ 48 ಬಿಲಿಯನ್‌ ಡಾಲರ್ಗೆ ಏರಿಸಿದೆ, ಇದು ತೈಲ ಆಮದು ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸುತ್ತದೆ.

ಬುಧವಾರ ದೆಹಲಿಯಲ್ಲಿ ಚಿಲ್ಲರೆ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ 90.93 ರೂ.ಗೆ ತಲುಪಿದ್ದು, ಕಳೆದೊಂದು ತಿಂಗಳಲ್ಲಿ ಪ್ರತಿ ಲೀಟರ್ಗೆ 5.23 ರೂ. ಏರಿಕೆಯಾಗಿದೆ. ಏಕೆಂದರೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ಕ್ರಮೇಣ ಉತ್ಪನ್ನಗಳ ಮೂಲ ಬೆಲೆಯನ್ನು ಹೆಚ್ಚಿಸುತ್ತಿವೆ. ಕೇಂದ್ರದ ತೆರಿಗೆ (ಮೂಲ ಅಬಕಾರಿ, ಹೆಚ್ಚುವರಿ ಶುಲ್ಕ, ಕೃಷಿ/ಮೂಲಸೌಕರ್ಯ ಸೆಸ್ ಮತ್ತು ರಸ್ತೆ/ಮೂಲಸೌಕರ್ಯ ಸೆಸ್) ಪ್ರಸ್ತುತ ಪ್ರತಿ ಲೀಟರ್‌ ಡೀಸೆಲ್‌ಗೆ 31.83 ರೂ. ಮತ್ತು ಪ್ರತಿ ಲೀಟರ್‌ ಪೆಟ್ರೋಲ್‌ಗೆ 32.98 ರೂ. ವಿಧಿಸಲಾಗುತ್ತಿದೆ. 2020ರ ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ ವಾಹನ ಇಂಧನಗಳ ಮೇಲಿನ ಹೆಚ್ಚುವರಿ ಶುಲ್ಕ ಮತ್ತು ಸೆಸ್ ಅನ್ನು ಪ್ರತಿ ಲೀಟರ್‌ ಪೆಟ್ರೋಲ್ ಮೇಲೆ 13 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 16 ರೂ. ವಿಧಿಸಲಾಗಿದೆ.

ಫೆಬ್ರವರಿ 1 ರಿಂದ ಗ್ರಾಹಕರ ಮೇಲೆ ವಿಧಿಸಲಾದ ಹೊಸ ಕೃಷಿ ಮೂಲಸೌಕರ್ಯ ಸೆಸ್‌ನ ಪರಿಣಾಮವನ್ನು ಸರಿದೂಗಿಸಲು, ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ಹೆಚ್ಚುವರಿ ಶುಲ್ಕವನ್ನು ಲೀಟರ್‌ಗೆ ಕೇವಲ 1 ರೂ.ಗಳಷ್ಟು ಕಡಿಮೆ ಮಾಡಲಾಗಿದ್ದು, ಮೂಲ ಅಬಕಾರಿ ಸುಂಕದ ದರಗಳು ಈಗ ಪೆಟ್ರೋಲ್‌ಗೆ 1.4 ರೂ. ಮತ್ತು ಡೀಸೆಲ್‌ಗೆ 1.8 ರೂ. ವಿಧಿಸಲಾಗಿದೆ.

ಸೆಸ್ ಮತ್ತು ಹೆಚ್ಚುವರಿ ಶುಲ್ಕ ಹಂಚಿಕೆ ಮಾಡಲಾಗದಿದ್ದರೂ ರಾಜ್ಯಗಳು ಸ್ವಯಂ ಇಂಧನ ಅಬಕಾರಿ ಸುಂಕದ ಆದಾಯದ ಶೇ.42ರಷ್ಟನ್ನು ಮೂಲ ಅಬಕಾರಿ ಸುಂಕದ ಘಟಕದಿಂದ ಮಾತ್ರ ಪಡೆಯುತ್ತವೆ. ಸಹಜವಾಗಿ ರಾಜ್ಯಗಳು ತಮ್ಮದೇ ಆದ ವ್ಯಾಟ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತವೆ. ಅದು ತಮ್ಮ ಬೊಕ್ಕಸಕ್ಕೆ ಮಾತ್ರ ಹೋಗುತ್ತದೆ, ಆದರೆ ಪ್ರಸ್ತುತ ಹೆಚ್ಚಿನ ಬೆಲೆಗಳು ವ್ಯಾಟ್ ಅನ್ನು ಹೆಚ್ಚಿಸುವ ವ್ಯಾಪ್ತಿಯನ್ನು ಮಿತಿಗೊಳಿಸುತ್ತವೆ.

error: Content is protected !! Not allowed copy content from janadhvani.com