janadhvani

Kannada Online News Paper

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ: ದಿನಾಂಕ ಪ್ರಕಟ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕಗಳು ನಿಗದಿಯಾಗಿವೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಮತದಾನಕ್ಕೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸಿದ್ದಾರೆ. ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಗೂ ಇದೇ ವೇಳೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಕೇರಳ, ಅಸ್ಸಾಂ, ಪಶ್ಚಿಮಬಂಗಾಳ, ತಮಿಳುನಾಡು ಸೇರಿ ಪುದುಚೇರಿ ರಾಜ್ಯಗಳ ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಪಶ್ಚಿಮಬಂಗಾಳದ 294 ಕ್ಷೇತ್ರಗಳು, ತಮಿಳುನಾಡಿನ 234 ಕ್ಷೇತ್ರಗಳು, ಕೇರಳದ 140 ಕ್ಷೇತ್ರಗಳು, ಅಸ್ಸಾಂನ 126 ಕ್ಷೇತ್ರಗಳು ಹಾಗೂ ಪುದುಚೇರಿಯ 30 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಐದು ರಾಜ್ಯಗಳ ವಿಧಾನಸಭಾ ಅವಧಿ ಮುಂದಿನ ಮೇ 24ಕ್ಕೆ ಕೊನೆಗೊಳ್ಳಲಿದೆ. ಈ ಕ್ಷಣದಿಂದಲೇ ಐದು ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಮೇ 2ರಂದು ನಡೆಯಲಿದೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ. ಕೇರಳದ 14 ಜಿಲ್ಲೆಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 2ಎಂದು ಫಲಿತಾಂಶ ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ಮಾರ್ಚ್ 27, ಎರಡನೇ ಹಂತ ಏಪ್ರಿಲ್ 1, ಮೂರನೇ ಹಂತ ಏಪ್ರಿಲ್ 6, ನಾಲ್ಕನೇ ಹಂತ ಏಪ್ರಿಲ್ 10, ಐದನೇ ಹಂತ ಏಪ್ರಿಲ್ 17, ಆರನೇ ಹಂತ ಏಪ್ರಿಲ್ 22, ಏಳನೇ ಹಂತ ಏಪ್ರಿಲ್ 26 ಹಾಗೂ ಕೊನೆಯ ಎಂಟನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದೆ. ಮೇ 02ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯುಕ್ತರಾದ ಸುನೀಲ್ ಅರೋರಾ ಅವರು ಮಾಹಿತಿ ನೀಡಿದರು.

ಕೊರೋನಾ ಬಳಿಕ ನಡೆಯುತ್ತಿರುವ ಎರಡನೇ ಚುನಾವಣೆ ಇದಾಗಿದೆ. ಈ ಮೊದಲು ಬಿಹಾರ ವಿಧಾನಸಭೆ ಚುನಾವಣೆ ನಡೆದಿತ್ತು. ಪಂಚರಾಜ್ಯಗಳ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರೋನಾ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com