ಹೊಸದಿಲ್ಲಿ: ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಕೆಂಪುಕೋಟೆಗೆ ನುಗ್ಗಿ ಸಿಖ್ ಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ನಟ ಹಾಗೂ ಹೋರಾಟಗಾರ ದೀಪ್ ಸಿಧು ಬಂಧನಕ್ಕೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ ಬಹುಮಾನ ನೀಡುವುದಾಗಿ ದಿಲ್ಲಿ ಪೊಲೀಸರು ಘೋಷಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳ ನಟ ದೀಪ್ ಸಿಧು, ಜುಗರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರು ನಾಪತ್ತೆಯಾಗಿದ್ದು, ಇವರ ಬಂಧನಕ್ಕೆ ಬಲೆ ಬೀಸಿರುವ ದೆಹಲಿ ಪೊಲೀಸರು, ಇವರ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ ಸಂಬಂಧ ದೂರು ದಾಖಲಾಗಿದೆ.
ಇನ್ನು ದಿಲ್ಲಿಯಲ್ಲಿ ಹಿಂಸಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾಗಿರುವ ಜಜ್ಬೀರ್ ಸಿಂಗ್, ಬುಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಬಂಧನಕ್ಕೂ ಪೊಲೀಸರು ಕ್ರಮ ಕೈಗೊಂಡಿದ್ದು, ಇವರ ಕುರಿತು ಮಾಹಿತಿ ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಅಂದು ಏನು ನಡೆದಿತ್ತು?
ಜನವರಿ 26ರಂದು ದಿಲ್ಲಿಯಲ್ಲಿ ರೈತರ ಕೃಷಿ ಕಾನೂನು ವಿರೋಧಿಸಿ ಟ್ರ್ಯಾಕ್ಟರ್ ರ‍್ಯಾಲಿ ಆಯೋಜಿಸಿದ್ದರು. ಪ್ರತಿಭಟನೆ ವೇಳೆ ನಿಗದಿತ ಮಾರ್ಗವನ್ನು ಬಿಟ್ಟು ದಿಲ್ಲಿಯೊಳಗೆ ಪ್ರವೇಶ ಮಾಡಿದ್ದರು. ದೆಹಲಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ದಿಲ್ಲಿಗೆ ನುಗ್ಗಿದ್ದರು.
ಈ ಪೈಕಿ ನಟ ದೀಪ್ ಸಿಧು ಹಾಗೂ ಆತನ ಸಂಗಡಿಗರು, ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳನ್ನು ಥಳಿಸಿ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದನು. ಈ ಬಗ್ಗೆ ಸಿಧು ಅವರೇ ವಿಡಿಯೋ ಮೂಲಕ ತಿಳಿಸಿದ್ದ. ಈ ಘಟನೆ ಬಳಿಕ ಬೈಕ್‌ನಲ್ಲಿ ತಪ್ಪಿಸಿಕೊಂಡಿದ್ದ ದೀಪ್ ಸಿಧು ನಂತರ ನಾಪತ್ತೆಯಾಗಿದ್ದಾನೆ. ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.