ನವದೆಹಲಿ,ಜ.30: ಭಾರತದ ರಾಜಧಾನಿ ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ನಿನ್ನೆ ಸಂಜೆ ಬಾಂಬ್ ಸ್ಫೋಟ ಸಂಭವಿಸಿದೆ. ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದರಿಂದ ಈ ಘಟನೆಯಲ್ಲಿ ಇದುವರೆಗೂ ಯಾರಿಗೂ ಗಾಯಗಳಾಗಿಲ್ಲ.
ಈ ಘಟನೆಯ ಕುರಿತು ವಿಶೇಷ ಪೊಲೀಸ್ ತಂಡದಿಂದ ತನಿಖೆ ನಡೆಸಲಾಗುತ್ತಿದ್ದು, ಇಸ್ರೇಲ್ ರಾಯಭಾರಿ ಕಚೇರಿಯ ಬಳಿ PETN ಎಂಬ ಹೈಗ್ರೇಡ್ ಮಿಲಿಟರಿ ಸ್ಫೋಟಕ ಪತ್ತೆಯಾಗಿದೆ. ಉಗ್ರ ಸಂಘಟನೆಗಳಾದ ಐಸಿಸ್, ಅಲ್ಖೈದಾ ಸಂಘಟನೆಗಳಲ್ಲಿ ಈ ರೀತಿಯ ಹೈಗ್ರೇಡ್ ಸ್ಫೋಟಕಗಳು ಸಿಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದು, ನಿನ್ನೆ ನಡೆದ ಬಾಂಬ್ ಸ್ಫೋಟದ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಸಾಕ್ಷಿಗಳು ಇನ್ನೂ ಸಿಕ್ಕಿಲ್ಲ.
ಈಗಾಗಲೇ ಇಸ್ರೇಲ್ ರಾಯಭಾರಿ ಕಚೇರಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ನಿನ್ನೆ ಸಂಜೆ ಇಬ್ಬರು ಕ್ಯಾಬ್ನಿಂದ ಇಳಿದು, ಬಾಂಬ್ ಸ್ಫೋಟವಾದ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿರುವ ದೃಶ್ಯ ಸೆರೆಯಾಗಿದೆ. ಆ ಇಬ್ಬರನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ವಿಮಾನ ನಿಲ್ದಾಣಗಳು, ಪ್ರಮುಖ ಕಟ್ಟಡಗಳು, ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದು ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ತಿಳಿಸಿದೆ. ಹಾಗೇ, ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದು ಉಗ್ರರ ಸಂಚಿರಬಹುದು ಎಂದು ಇಸ್ರೇಲ್ ಕೂಡ ಅನುಮಾನ ವ್ಯಕ್ತಪಡಿಸಿದೆ.
ನವದೆಹಲಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಜಿಂದಾಲ್ ಹೌಸ್ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ದೆಹಲಿ ವಿಶೇಷ ತನಿಖಾ ತಂಡದ ಪೊಲೀಸರು ರಾಷ್ಟ್ರೀಯ ತನಿಖಾ ತಂಡದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.