ಹೈದರಾಬಾದ್: ಲವ್ ಜಿಹಾದ್ ವಿರುದ್ಧ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಕಾನೂನು ರೂಪಿಸುತ್ತಿರುವುದಕ್ಕೆ, ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಒವೈಸಿ, ಸಂವಿಧಾನದಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ. ಆದರೆ ಬಿಜೆಪಿ ಕೇವಲ ರಾಜಕೀಯ ಲಾಭಕ್ಕಾಗಿ ಲವ್ ಜಿಹಾದ್ ಪದವನ್ನು ಸೃಷ್ಟಿಸಿದೆಯಲ್ಲದೇ, ಅದರ ವಿರುದ್ಧ ಕಾನೂನು ರೂಪಿಸುವ ನಾಟಕವಾಡುತ್ತಿದೆ ಎಂದು ಒವೈಸಿ ಹರಿಹಾಯ್ದಿದ್ದಾರೆ.
ಲವ್ ಜಿಹಾದ್ ವಿರುದ್ಧ ಬಿಜೆಪಿ ಆಡಳಿತವಿರುವ ರಾಜ್ಯಗಳು ಕಾನೂನು ರೂಪಿಸುವ ಮೂಲಕ ಸಂವಿಧಾನವನ್ನು ಅವಮಾನಿಸುತ್ತಿವೆ. ಅಸ್ತಿತ್ವದಲ್ಲೇ ಇಲ್ಲದ ಅಪರಾಧಕ್ಕೆ ಕಾನೂನು ರೂಪಿಸುವ ಮೂಲಕ ಬಿಜೆಪಿ ಸಂವಿಧಾನಕ್ಕೆ ಅಪಚಾರ ಎಸಗುತ್ತಿದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದರು.
ಒಂದು ವೇಳೆ ಬಿಜೆಪಿಗೆ ಕಾನೂನು ಮಾಡಲೇಬೇಕಿದ್ದರೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕುರಿತು ಮಾಡಲಿ, ಉದ್ಯೋಗ ಸೃಷ್ಟಿಗಾಗಿ ಕಾನೂನು ತರಲಿ ಎಂದು ಆಗ್ರಹಿಸಿದ ಒವೈಸಿ, ರಾಜಕೀಯ ಲಾಭದ ಕುರಿತು ಚಿಂತಿಸುವುದನ್ನು ಬಿಟ್ಟು ಜ್ವಲಂತ ಸಮಸ್ಯೆಗಳ ಕುರಿತು ಬಿಜೆಪಿ ಚಿಂತಿಸಲಿ ಎಂದು ಒತ್ತಾಯಿಸಿದರು.
ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಈಗಾಗಲೇ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿ ಮಾಡಲಾಗಿದ್ದು, ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತ ಇರುವ ಇತರ ರಾಜ್ಯಗಳು ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ದಟ್ಟವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಲವ್ ಜಿಹಾದ್ ಪ್ರಸ್ತಾಪ ಬಿಜೆಪಿ ಹಾಗೂ ಎಐಎಂಐಎಂ ಎರಡೂ ಪಕ್ಷಗಳಿಗೆ ಮುಖ್ಯವಾಗಲಿದೆ. ಬಿಜೆಪಿ ಲವ್ ಜಿಹಾದ್ ವಿರುದ್ಧ ಧ್ವನಿ ಎತ್ತಲಿದ್ದರೆ, ಎಐಎಂಐಎಂ ಲವ್ ಜಿಹಾದ್ ಎಂಬುದು ಬಿಜೆಪಿ ಸೃಷ್ಟಿ ಎಂದು ಪ್ರಚಾರ ಮಾಡಲಿರುವುದು ಖಚಿತ.