janadhvani

Kannada Online News Paper

ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಗಾಜಿನ ಗುಮ್ಮಟದ, ದುಂಡಾಕಾರದ ಮಸೀದಿ

ಲಕ್ನೋ, ಡಿ.20: ಅಯೋಧ್ಯೆಯ ಬಾಬರಿ ಮಸೀದಿ ನೆಲೆಗೊಂಡಿದ್ದ ಸಮೀಪದ ಧನ್ನೀಪುರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ನೂತನ ಮಸೀದಿಯ ನೀಲನಕ್ಷೆಯನ್ನು ಬಿಡುಗಡೆಗೊಳಿಸಿದ್ದು, 5 ಎಕರೆ ವಿಸ್ತೀರ್ಣದ ಹಚ್ಚಹಸಿರಿನ ಪ್ರದೇಶದ ನಡುವೆ ಗಾಜಿನ ಗುಮ್ಮಟ ಹೊಂದಿರುವ ದುಂಡಾಕಾರದ ಮಸೀದಿ, ಅದರ ಹಿಂದೆ ಆಸ್ಪತ್ರೆ ನಿರ್ಮಾಣ ಆಗಲಿದೆ.

ಮಸೀದಿ ನಿರ್ಮಾಣದ ಮೊದಲ ಹಂತದ ಕಾಮಗಾರಿ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮವು ಜನವರಿ 26ರ 71ನೇ ಗಣರಾಜ್ಯೋತ್ಸವದಂದು ನಡೆಯಲಿದೆ. ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ ಅದಾಗಿರುವ ಹಿನ್ನೆಲೆಯಲ್ಲಿ ಜ.26 ರಂದು ಕಾಮಗಾರಿಗೆ ಚಾಲನೆ ನೀಡಲು ಮಸೀದಿ ನಿರ್ಮಾಣ ಹೊಣೆ ಹೊತ್ತಿರುವ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ನಿರ್ಧರಿಸಿದೆ.ದೇಶದಲ್ಲಿರುವ ಉಳಿದೆಲ್ಲಾ ಮಸೀದಿಗಳಿಗಿಂತ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿ ವಿಭಿನ್ನವಾಗಿದ್ದು, ಆಕರ್ಷಣೀಯವಾಗಿರಲಿದೆ.ಪ್ರೊ.ಎಸ್.ಎಂ. ಅಖ್ತರ್ ಅವರು ಈ ಮಸೀದಿಯನ್ನು ವಿನ್ಯಾಸಗೊಳಿಸಿದ್ದು, ಅತ್ಯಾಧುನಿಕ ಶೈಲಿಯಲ್ಲಿದೆ.

ಆಸ್ಪತ್ರೆ ಕಟ್ಟಡ ಸಹ ಗಮನಸೆಳೆಯುವಂತಿದೆ. ಮಸೀದಿಯಲ್ಲಿ 2 ಸಾವಿರ ಮಂದಿ ಕೂರಬಹುದಾಗಿದೆ.ಇಂಡೋ ಇಸ್ಲಾಮಿಕ್ ಕೇಂದ್ರ, ಸಮುದಾಯ ಅಡುಗೆ ಕೋಣೆ ಹಾಗೂ ಮ್ಯೂಸಿಯಂ ಅನ್ನು ನಿರ್ಮಾಣ ಮಾಡಲು ಫೌಂಡೇಶನ್ ಉದ್ದೇಶಿಸಿದೆ.
ಈ ಮಸೀದಿಯು ಬಾಬ್ರಿ ಮಸೀದಿಯ ವಿನ್ಯಾಸವನ್ನು ಹೊಂದಿಲ್ಲ. ಅಲ್ಲದೆ ಉದ್ದೇಶಿತ ಮಸೀದಿಗೆ ಯಾವುದೇ ಸಾಮ್ರಾಟ ಅಥವಾ ರಾಜನ ಹೆಸರನ್ನು ಇಡುವುದಿಲ್ಲ ಎಂದು ಈಗಾಗಲೇ ಟ್ರಸ್ಟ್ ತಿಳಿಸಿದೆ. ಎರಡನೇ ಹಂತದ ಕಾಮಗಾರಿ ವೇಳೆ ಆಸ್ಪತ್ರೆಯನ್ನು ವಿಸ್ತರಿಸುವ ಉದ್ದೇಶವನ್ನೂ ಟ್ರಸ್ಟ್ ಹೊಂದಿದೆ.

ಮುಖ್ಯವಾಗಿ ಈ ಆಸ್ಪತ್ರೆ ಮೂಲಕ ನಾವು 1400 ವರ್ಷಗಳ ಹಿಂದೆ ಪ್ರವಾದಿ ಕಲಿಸಿದ ಇಸ್ಲಾಮಿನ ನೈಜ ತತ್ವವನ್ನು ಸಾರಲಿದ್ದೇವೆ. ಆಸ್ಪತ್ರೆಯು ಮಸೀದಿಯ ವಾಸ್ತುಶಿಲ್ಪದೊಂದಿಗೆ ಹೋಲಿಕೆಯಾಗಲಿದ್ದು, ಇಸ್ಲಾಮಿನ ಚಿಹ್ನೆಗಳು ಮತ್ತು ಕ್ಯಾಲಿಗ್ರಫಿಯನ್ನು ಒಳಗೊಂಡಿರಲಿದೆ. ಒಟ್ಟು 300 ಬೆಡ್ ಗಳಿರುವ ಈ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಟ್ರಸ್ಟ್ ಸದಸ್ಯರೊಬ್ಬರು
ಮಾಹಿತಿ ನೀಡಿದ್ದಾಗಿ ವರದಿ ತಿಳಿಸಿದೆ.

ಅಯೋಧ್ಯೆಯ ರಾಮಜನ್ಮಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಹಂಚಿಕೆ ಮಾಡಿದ್ದ ಸುಪ್ರೀಂಕೋರ್ಟ್, ಅಯೋಧ್ಯೆ ಹೊರವಲಯದಲ್ಲಿ 5ಎಕರೆ ಜಮೀನನ್ನು ಮಸೀದಿ ನಿರ್ಮಾಣಕ್ಕೆ ನೀಡಿ 2019ರಲ್ಲಿ ತೀರ್ಪು ನೀಡಿತ್ತು. ಅಯೋಧ್ಯೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದರು.

error: Content is protected !! Not allowed copy content from janadhvani.com