janadhvani

Kannada Online News Paper

ಲವ್ ಜಿಹಾದ್ ಹೆಸರಲ್ಲಿ ಬಂಧನಕ್ಕೆ ಕೋರ್ಟ್ ತಡೆ- ಯೋಗಿ ಸರ್ಕಾರಕ್ಕೆ ಮುಖಭಂಗ

ಅಕ್ಷಯ್ ಕುಮಾರ್ ಅವರ ಹೆಂಡತಿ ವಯಸ್ಕರಾಗಿದ್ದು, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯೋಚಿಸುವ ಸಾಮರ್ಥ್ಯವಿದೆ. ತನಗೆ ಏನು ಬೇಕೆಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವಳಿಗಿದೆ ಎಂದು ಕೂಡ ಹೈಕೋರ್ಟ್ ಹೇಳಿದೆ.

ಲಕ್ನೋ,ಡಿ. 19: ಉತ್ತರ ಪ್ರದೇಶ ಸರ್ಕಾರದ ವಿವಾದಾತ್ಮಕ ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ 32 ವರ್ಷದ ಮುಸ್ಲಿಂ ವ್ಯಕ್ತಿಯ ಬಂಧನಕ್ಕೆ ಅಲಹಾಬಾದ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಮತಾಂತರ ನಿಷೇಧ ಕಾಯ್ದೆಯಡಿ ನದೀಮ್ ಮತ್ತು ಸಲ್ಮಾನ್ ವಿರುದ್ಧ ಮುಜಾಫರ್ನಗರದಲ್ಲಿ ಅಕ್ಷಯ್ ಕುಮಾರ್ ತ್ಯಾಗಿ ಕಳೆದ ತಿಂಗಳು ದೂರು ನೀಡಿದ್ದರು. ಆದರೆ, ಆ ಇಬ್ಬರ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಈ ರೀತಿ ಬಂಧನದಿಂದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕೋರ್ಟ್ ಹೇಳಿದೆ.

ಡಾ. ಕಫೀಲ್ ಖಾನ್ ರನ್ನು ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್ ಆದೇಶದಿಂದ ಮುಖಭಂಗಕ್ಕೀಡಾಗಿದ್ದ ಯೋಗಿ ಸರ್ಕಾರಕ್ಕೆ ಇದೀಗ ಲವ್ ಜಿಹಾದ್ ಕಾನೂನಿಲ್ಲೂ ಹಿನ್ನಡೆಯುಂಟಾಗಿದೆ.

ಔಷಧೀಯ ಕಂಪನಿಯೊಂದರಲ್ಲಿ ಕಾರ್ಮಿಕ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಅಕ್ಷಯ್ ಕುಮಾರ್ ತ್ಯಾಗಿ ಮುಜಾಫರ್ ನಗರದಲ್ಲಿ ಸಲ್ಮಾನ್ ಮತ್ತು ನದೀಮ್ ವಿರುದ್ಧ ದೂರು ದಾಖಲಿಸಿದ್ದರು. ನದೀಮ್ ಹರಿದ್ವಾರದಲ್ಲಿರುವ ನನ್ನ ಮನೆಗೆ ಆಗಾಗ ಬಂದು ನನ್ನ ಹೆಂಡತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ ಪ್ರೀತಿಯ ನಾಟಕವಾಡಿದ್ದಾನೆ. ಆಕೆಯನ್ನು ತನ್ನತ್ತ ಸೆಳೆಯಲು ಸ್ಮಾರ್ಟ್ ಫೋನ್ ಒಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾನೆ. ಅಲ್ಲದೆ, ನನ್ನ ಹೆಂಡತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ ಎಂದು ಅಕ್ಷಯ್ ದೂರಿನಲ್ಲಿ ವಿವರಿಸಿದ್ದರು. ಮತಾಂತರ ನಿಷೇಧ ಕಾಯ್ದೆಯಡಿ ನದೀಮ್ ವಿರುದ್ಧ ಕೇಸ್ ದಾಖಲಾಗಿತ್ತು.

ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ನದೀಮ್ ಎಫ್ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನಿನ್ನೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಪೊಲೀಸರು ಆತನ ವಿರುದ್ಧ ಬಲವಂತವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಮುಂದಿನ ವಿಚಾರಣೆಯವರೆಗೂ ಆತನನ್ನು ಬಂಧಿಸುವಂತಿಲ್ಲ. ನದೀಮ್ ಬಲವಂತದಿಂದ ಅಕ್ಷಯ್ ಕುಮಾರ್ ಅವರ ಹೆಂಡತಿಯನ್ನು ಮದುವೆಯಾಗಲು ಹೊರಟಿದ್ದಾರೆ ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

ಅಕ್ಷಯ್ ಕುಮಾರ್ ಅವರ ಹೆಂಡತಿ ವಯಸ್ಕರಾಗಿದ್ದು, ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಯೋಚಿಸುವ ಸಾಮರ್ಥ್ಯವಿದೆ. ತನಗೆ ಏನು ಬೇಕೆಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವಳಿಗಿದೆ ಎಂದು ಕೂಡ ಹೈಕೋರ್ಟ್ ಹೇಳಿದೆ.

ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ಅನ್ನು ತಡೆಗಟ್ಟುವ ದೃಷ್ಟಿಯಿಂದ ಬಲವಂತದ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆಯನ್ನು ಜಾರಿ ಮಾಡಿತ್ತು. ಇದೇ ರೀತಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲಿಯೂ ಈ ಕಾನೂನು ತರಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ, ಈ ಕಾನೂನಿಗೆ ಸಾಕಷ್ಟು ವಿರೋಧಗಳೂ ವ್ಯಕ್ತವಾಗಿವೆ.

ಮುಸ್ಲಿಂ ಯುವಕನನ್ನು ಮದುವೆಯಾಗಿ, ಗರ್ಭಿಣಿಯಾಗಿದ್ದ ಯುವತಿಯನ್ನು ಮೊರಾದಾಬಾದ್ನಲ್ಲಿ ಇತ್ತೀಚೆಗೆ ಪೊಲೀಸರು ವಶಕ್ಕೆ ಪಡೆದಿದ್ದರು. 5 ತಿಂಗಳಿನಿಂದ ಒಟ್ಟಿಗೇ ಇದ್ದ ದಂಪತಿಯನ್ನು ಲವ್ ಜಿಹಾದ್ ಆರೋಪದಲ್ಲಿ ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಹಿಂದೂ ಹುಡುಗಿಯ ಧರ್ಮವನ್ನು ಬದಲಾಯಿಸಿ, ಆಕೆಯನ್ನು ನಿಖಾ ಮಾಡಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಪೊಲೀಸರು ಬಂಧಿಸಿದ ಕಾರಣ ಆತಂಕಕ್ಕೊಳಗಾದ ಆ ಯುವತಿಗೆ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಿದ ಮೇಲೆ ಆಕೆಗೆ ಗರ್ಭಪಾತವಾಗಿತ್ತು.

ಈ ಪ್ರಕರಣಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಮೊರಾದಾಬಾದ್ನ ಸಿಜೆಎಂ ಕೋರ್ಟ್ ಆಕೆಯನ್ನು ವಾಪಾಸ್ ಗಂಡನ ಮನೆಗೆ ಕಳುಹಿಸುವಂತೆ ಸೂಚಿಸಿತ್ತು. ಮುಸ್ಲಿಂ ಯುವಕರು ಬಲವಂತದಿಂದ ಹಿಂದೂ ಯುವತಿಯರನ್ನು ಮದುವೆಯಾಗಿ, ಮತಾಂತರಗೊಳಿಸುತ್ತಿದ್ದಾರೆ ಎಂದು ಬಲಪಂಥೀಯ ಸಮುದಾಯಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಕಾನೂನು ತರಲು ಹಲವು ಸರ್ಕಾರಗಳು ಮುಂದಾಗಿದ್ದವು.

error: Content is protected !! Not allowed copy content from janadhvani.com