janadhvani

Kannada Online News Paper

ಜನವರಿ 1ರಿಂದ ಶಾಲೆಗಳು ಪುನರಾರಂಭ- ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಿಲ್ಲ

ಬೆಂಗಳೂರು,ಡಿ.19: 2021ರ ಜನವರಿ 1ರಿಂದ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧಾರ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಶಾಲೆ ಆರಂಭವಾದರೂ ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ಆದರೆ, ಬಿಸಿಯೂಟದ ಪರಿಕರಗಳನ್ನು ಮನೆಗೆ ಕಳುಹಿಸಲು ಕ್ರಮ ವಹಿಸಲಾಗಿದೆ. ಮಕ್ಕಳು ತರಗತಿಗೆ ಬರಲು ಕಡ್ಡಾಯವಿಲ್ಲ, ಆದರೆ ದಾಖಲಾತಿಗೆ ಕಡ್ಡಾಯವಿದೆ. ಪರೀಕ್ಷೆಗೆ ದಾಖಲಾತಿ ಪ್ರಮುಖವಾಗಿರುವುದರಿಂದ ದಾಖಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಮಕ್ಕಳು ಹಾಗೂ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಶಾಲೆಗೆ ಮಕ್ಕಳನ್ನು ಕಳುಹಿಸಲೇಬೇಕು ಎಂದು ಒತ್ತಾಯ ಏನೂ ಇಲ್ಲ. ಆನ್ಲೈನ್ನಲ್ಲಿ ಬೇಕಿದ್ದರೂ ಮಕ್ಕಳು ಕಲಿಯಬಹುದು. ಯಾರು ಶಿಕ್ಷಕರಿಂದಲೇ ಕಲಿಯಬೇಕು ಎಂದು ಬಯಸಿದರೆ ಅವರನ್ನು ಪೋಷಕರು ಶಾಲೆಗೆ ಕಳುಹಿಸಲಿ. ಇಲ್ಲವೆಂದರೆ ಆನ್ಲೈನ್ ಮೂಲಕ ಬೇಕಿದ್ದರೂ ಕಲಿಯಲಿ. ಭಾನುವಾರ ತರಗತಿ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ.

ಉಳಿದ ಶಾಲಾ ಮಕ್ಕಳಿಗೆ ತರಗತಿ ಆರಂಭದ ಬಗ್ಗೆ ಮುಂದೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಮಕ್ಕಳಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಶಾಲೆಯಲ್ಲಿ ಕ್ರಮ ವಹಿಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಏನು ಮುಂಜಾಗ್ರತಾ ಕ್ರಮ ವಹಿಸಿದ್ದೆವೋ ಈಗ ಶಾಲೆ ಆರಂಭ ಮಾಡುವಾಗಲೂ ಅದೇ ರೀತಿಯ ಕ್ರಮ ವಹಿಸುತ್ತೇವೆ. ಮಕ್ಕಳಿಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ವಹಿಸುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಗೆ ತರಗತಿ ಆರಂಭ ಮಾಡಿ ಎಂದು ಬಹಳ ಬೇಡಿಕೆಗಳು ಬಂದಿತ್ತು. ಎಸ್ಡಿಎಂ‌ಸಿ ಕಮಿಟಿಯವರು ಕೂಡ ಶಾಲೆ ಆರಂಭ ಮಾಡಲು ಹೇಳಿದ್ದಾರೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಅವರ ಜತೆ ಚರ್ಚೆ ಮಾಡಿದಾಗಲೂ ಶಾಲೆ‌ ಆರಂಭ ಮಾಡೋಕೆ ಸಲಹೆ ಕೊಟ್ಟಿದ್ದಾರೆ. ಯಾವುದೋ ಒಂದೆರೆಡು ಪ್ರಕರಣ ಆದಾಗ ಅದಕ್ಕೆ ಹೆಚ್ಚು ಒತ್ತು ಕೊಡುವುದು ಸೂಕ್ತ ಅಲ್ಲ. ರಾಜ್ಯದಲ್ಲಿ ಶಾಲಾ ಕಾಲೇಜು ಆರಂಭದ ಬಗ್ಗೆ ಚರ್ಚೆ ಆಗಿದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮಾರ್ಗದರ್ಶಿ ನೀಡಿದ ವರದಿ ಆಧಾರದ ಮೇಲೆ ಎಸ್ಎಸ್ಎಲ್ಸಿ ಪರೀಕ್ಷೆ ಮಾಡಿದ್ದೆವು. ಶಾಲೆ ಆರಂಭ ಮಾಡುವ ವಿಚಾರಕ್ಕೆ ಡಿಸೆಂಬರ್ವರೆಗೂ ಬೇಡ ಎಂದಿತ್ತು. ಎರಡನೇ ಅಲೆ, ಚಳಿಗಾಲ ಈ ಎಲ್ಲಾ ಕಾರಣ ಇತ್ತು. ಆದರೆ, ಗುರುವಾರ ಆರೋಗ್ಯ ಸಚಿವರ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ಸೇರಿ ಮಾರ್ಗದರ್ಶಿ ಸೂತ್ರ ನೀಡಿದೆ. ಪಬ್ಲಿಕ್ ಪರೀಕ್ಷೆ ಇರುವುದರಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಜನವರಿ 1ರಿಂದ ಆರಂಭ ಮಾಡಬಹುದು ಎಂದು ಹೇಳಿದೆ. ಇದಕ್ಕೆ ಸಿಎಂ ನೇತೃತ್ವದ ಸಭೆಯಲ್ಲೂ ಒಪ್ಪಿಗೆ ಸಿಕ್ಕಿದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೋರ್ಟ್ ವಿದ್ಯಾಗಮ ಆರಂಭ ಮಾಡುವುದಕ್ಕೆ ಅನುಮತಿ ನೀಡಿದೆ. 6ನೇ ತರಗತಿಯಿಂದ 9ನೇ ತರಗತಿಯವರೆಗೂ ವಿದ್ಯಾಗಮ ಆರಂಭವಾಗಲಿದೆ. ಆದರೆ, ಶಾಲಾ ಆವರಣದಲ್ಲಿ ಮಾತ್ರ ವಿದ್ಯಾಗಮ ಆರಂಭವಾಗಲಿದೆ. ಶಾಲೆಗೆ ಮಕ್ಕಳು ಬರುವುದಕ್ಕೆ ವ್ಯವಸ್ಥೆ ಇದೆ. ಅದಕ್ಕೆ ಪೋಷಕರ ಒಪ್ಪಿಗೆ ಇರಬೇಕು. ಶೀತ, ನೆಗಡಿ , ಕೆಮ್ಮು ಇಲ್ಲ ಎಂದು ಬರೆಸಿಕೊಳ್ಳಬೇಕು. ಗ್ರಾಮೀಣ ಅಭಿವೃದ್ಧಿ, ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸ್ಯಾನಿಟೈಸರ್ ಮಾಡುವುದಕ್ಕೆ ಸಿದ್ದರಿದ್ದಾರೆ. ವಿದ್ಯಾಗಮವನ್ನು ಬೇರೆಲ್ಲೋ ಮಾಡುವಂತಿಲ್ಲ, ಶಾಲಾ ಆವರಣದಲ್ಲಿಯೇ ಮಾಡಬೇಕು. ಕೊಠಡಿ ಒಳಗೆ ಕೇವಲ 15 ಮಕ್ಕಳು ಮಾತ್ರ ಇರಲು ಅವಕಾಶವಿರಲಿದೆ. ಟೈಮ್ ಬಗ್ಗೆ, ಯಾವ ದಿನ ಯಾವ ತರಗತಿ ನಡೆಯುತ್ತೆ ಎಂಬ ಬಗ್ಗೆ ಮಾಹಿತಿ ನೀಡುತ್ತೇವೆ. ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠ ಮುಂದುವರೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com