janadhvani

Kannada Online News Paper

ಬಾಬರಿ ಮಸ್ಜಿದ್ : ಮರೆಯಲಾಗದ ಅನ್ಯಾಯದ ನೆನಪುಗಳು

ಇದು ಭಾರತ ದೇಶವಾಗಿದೆ. ಸರ್ವ ಧರ್ಮೀಯರ ಶಾಂತಿಯ ತೋಟವಿದು. ಈ ದೇಶ ಕಟ್ಟಲು ಮುಸ್ಲಿಮರು ಕೂಡ ಮುಂಚೂಣಿಯ ಚಳವಳಿಯಲ್ಲಿ ಇದ್ದದ್ದು ನೈಜ ಚರಿತ್ರೆಯನ್ನು ಓದಿದರೆ ಯಾರಿಗೂ ತಿಳಿಯಬಹುದು.!

✍️ಕೊಡಂಗಾಯಿ ಕಾಮಿಲ್ ಸಖಾಫಿ

1992 ಡಿಸೆಂಬರ್ 6 ಜಾಗತಿಕ ಮುಸ್ಲಿಮರಿಗೆ ಮಾತ್ರವಲ್ಲ, ನೋವು ಏನೆಂದು ಮನದಟ್ಟು ಮಾಡಲು ಶಕ್ತಿಯಿರುವ ಪ್ರತಿ ಜೀವಿಗಳ ಕಣ್ಣೀರು ಹರಿಸಿದ ದಿನವಾಗಿತ್ತದು.

ಶತಮಾನಗಳಿಂದ ಆರಾಧನೆಗಾಗಿ ಉಪಯೋಗಿಸಲಾಗುತ್ತಿದ್ದ ಬಾಬರಿ ಮಸೀದಿಯು ಡಿಸೆಂಬರ್ 6ರ ಭಾನುವಾರದಂದು ಜಾತಿವಾದಿಗಳ, ಫ್ಯಾಸಿಸ್ಟ್ ಶಕ್ತಿಗಳ ಕರಾಳ ಹಸ್ತಗಳಿಂದ ನೆಲಕ್ಕುರುಳಿದಾಗ ಕಣ್ಣೀರು ಹರಿಸಿದ್ದು ಇಲ್ಲಿನ ಮುಸ್ಲಿಮರು ಮಾತ್ರವಲ್ಲ, ಮಾನವೀಯ ಮೌಲ್ಯವನ್ನು ಮನಸ್ಸಿನಲ್ಲಿ ಜೋಪಾನವಾಗಿಟ್ಟ ಭೂಮಿಯಲ್ಲಿರುವ ಜೀವಿಗಳೆಲ್ಲವೂ ಆ ದುಃಖದಲ್ಲಿ ಸಹಭಾಗಿಗಳಾಗಿದ್ದವು.

ಮುಸ್ಲಿಮರ ಪಾಲಿಗೆ ಹೇಳುವುದಾದರೆ ಈ ಭೂಮಿಯಲ್ಲಿ ಪ್ರತಿನಿತ್ಯವೂ ಮಸೀದಿಗಳಂತಹ ಆರಾಧನಾಲಯಗಳು ಸ್ಥಾಪಿಸಲ್ಪಡುತ್ತದೆ. ಅಂತಹ ಮಸೀದಿಗಳಲ್ಲಿ ಬಾಬರಿಯು ಒಂದಾಗಿದೆ. ಅಲ್ಲಿನ ಆರಾಧನೆಗೆ ಇತರ ಮಸೀದಿಗಳಲ್ಲಿ ಸಿಗುವ ಪುಣ್ಯವೇ ಸಿಗುವುದು. ಆದರೂ ಒಂದು ಮಸೀದಿ ನಿರ್ಮಿಸಿ ವಕ್ಫ್ ಮಾಡಿದರೆ ಬಳಿಕ ಅದರ ಹಕ್ಕುಗಳೆಲ್ಲವೂ ಅಲ್ಲಾಹನಿಗೆ ಮರಳುತ್ತದೆ. ಅಲ್ಲಾಹುವಿನ ಭವನವೆಂದೇ ನಂತರ ಅದನ್ನು ವಿಶ್ಲೇಷಿಸಲಾಗುತ್ತದೆ. ಅಲ್ಲಿ ನಿರ್ವಹಿಸುವ ಆರಾಧನೆಗೆ ದುಪ್ಪಟ್ಟು ಪ್ರತಿಫಲವು ಲಭ್ಯವಾಗಲು ಇದುವೇ ಕಾರಣವಾಗುತ್ತದೆ. ಆ ಸ್ಥಳದಲ್ಲಿ ಮೌನವಾಗಿ ಕುಳಿತು/ನಿಂತು ಕೊಂಡರೂ ಖಾತೆಗೆ ಪುಣ್ಯಗಳು ಜಮೆಯಾಗುತ್ತಲೇ ಇರುತ್ತದೆ. ಮುಂದೆ ಯಾವ ಕಾರಣಕ್ಕೂ ಅದನ್ನು ಇನ್ನಿತರ ಯಾವುದೇ ಕೇಂದ್ರಗಳಾಗಿ ಬಳಸುವಂತಿಲ್ಲ. ಆದುದರಿಂದ ಆ ಜಾಗವು ಅಂತ್ಯ ದಿನದ ತನಕ ಮಸೀದಿಯಾಗಿಯೇ ಉಳಿಯುವುದು.

ಹಲವು ವರ್ಷಗಳಿಂದ ನಮಾಝ್ ಗಳಂತಹ ಆರಾಧನೆಗಾಗಿ ಉಪಯೋಗಿಸಲಾಗುತ್ತಿದ್ದ ಬಾಬರಿ ಮಸೀದಿಯನ್ನು ಭಯೋತ್ಪಾದಕರ ತಂಡವೊಂದು ಧ್ವಂಸಗೈದಾಗ ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರಿದರೂ ಇಲ್ಲಿನ ನ್ಯಾಯಾಲಯವು ಆಡಳಿತ ವರ್ಗದ ಕೈ ಗೊಂಬೆಯಾಗಿರುವುದರಿಂದ ಸತ್ಯಕ್ಕೆ ಸೋಲಾಗಿತ್ತು. ನ್ಯಾಯವು ಮರೀಚಿಕೆಯಾಗಿತ್ತು. ಅಂದ ಮಾತ್ರಕ್ಕೆ ಇಲ್ಲಿನವರಿಗೆ ಮಾನವಾಗಿರಲು ಸಾಧ್ಯವೇ.?
ಮಸೀದಿಯು ಮುಸ್ಲಿಮರಿಗೆ ಮರಳಿ ಸಿಗುವ ತನಕ ಇಲ್ಲಿನ ಅನ್ಯಾಯಕ್ಕೊಳಗಾದವರಿಂದ ಹೋರಾಟಗಳು ನಡೆಯುತ್ತಲೇ ಇರುವುದು. ಒಂದು ದಿನ ಆ ಸಮರದಲ್ಲಿ ನಾವು ವಿಜಯಿಯಾಗುವೆವು ಎಂಬ ಖಚಿತವಾದ ನಂಬಿಕೆ ನಮಗಿದೆ.

ಪವಿತ್ರ ಕಅ್’ಬಃವನ್ನು ಕೆಡವಲು ಗಜ ವೀರರ ಸೈನ್ಯವೊಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರ ಜನನದ ಹಿಂದಿನ ವರ್ಷವು ಹೊರಟಿತ್ತು. ಯಮನ್ ದೇಶದ ರಾಜ ಅಬ್ರಹತ್ ಎಂಬವರು ತನ್ನ ದ್ವೇಷವನ್ನು ತೀರಿಸಲು ಮುಂದಡಿಯಿಟ್ಟಿದ್ದನು. ಸೇನೆಯು ಮಕ್ಕಾಕ್ಕೆ ತಲುಪುವುದರೊಂದಿಗೆ ಶತ್ರು ಸಂಹಾರವು ನಡೆಯಿತು. ಅಲ್ಲಾಹು ಕಅ್’ಬಃವನ್ನು ಕಾಪಾಡಿದನು.ಅಂತ್ಯದಿನ ಸಮೀಪಿಸುವಾಗ ಅದುವೇ ಕಅಬಃವನ್ನು ಯಹೂದರ ತಂಡವೊಂದು ಹೊಡೆದುರುಳಿಸುವುದೆಂದು ಗ್ರಂಥಗಳಲ್ಲಿ ಕಾಣಬಹುದು.

ಅಂದರೆ ಇಲ್ಲಿನ ಎಲ್ಲವೂ ಅಲ್ಲಾಹುವಿನ ತೀರ್ಮಾನದಂತೆ ನಡೆಯುತ್ತದೆ. ಬಾಬರಿಯಂತಹ ಕೆಲವೊಂದು ಮಸೀದಿಗಳು ಶತ್ರುಗಳ ಹಸ್ತಗಳಿಂದ ಕೆಡವಲ್ಪಟ್ಟಿದ್ದರೆ, ಮುಂದೊಂದು ದಿನ ಅದುವೇ ಮಸ್ಜಿದ್ ಪುನರ್ ನಿರ್ಮಾಣವು ಅಲ್ಲಾಹನ ಖದ್ರ್ ನಲ್ಲಿ ಇದ್ದರೆ ಅದು ಖಂಡಿತವಾಗಿಯೂ ಸಾಧ್ಯವಿದೆ. ಅದು ತಲೆಯೆತ್ತಿ ನಿಲ್ಲುವ ತನಕ ನೈಜ ಭಾರತೀಯರ ಕಣ್ಣೀರು ಹರಿಯುತ್ತಲೇ ಹೋರಾಟ ನಡೆಯುತ್ತಲೇ ಇರುವುದು. ಇದು ಭಾರತ ದೇಶವಾಗಿದೆ. ಸರ್ವ ಧರ್ಮೀಯರ ಶಾಂತಿಯ ತೋಟವಿದು. ಈ ದೇಶ ಕಟ್ಟಲು ಮುಸ್ಲಿಮರು ಕೂಡ ಮುಂಚೂಣಿಯ ಚಳವಳಿಯಲ್ಲಿ ಇದ್ದದ್ದು ನೈಜ ಚರಿತ್ರೆಯನ್ನು ಓದಿದರೆ ಯಾರಿಗೂ ತಿಳಿಯಬಹುದು.!

ಕೊನೆಯಲ್ಲಿ :
ಬಾಬರಿ ಮಸ್ಜಿದ್ ವಿಷಯದಲ್ಲಿ ಸತ್ಯಕ್ಕೆ ವಿರುದ್ಧವಾದ ತೀರ್ಪನ್ನು ನೀಡಿದ್ದರೂ ನ್ಯಾಯಾಲಯದ ಪಾವಿತ್ರತೆಯನ್ನು ಗೌರವಿಸಿದ ಕಾರಣದಿಂದಲೇ ಇಲ್ಲಿನ ಶೋಷಿತ ವರ್ಗವು ಮೌನವಾಗಿರುವುದು. ಆದರೆ ಈ ಮೌನವನ್ನು ದುರುಪಯೋಗ ಪಡಿಸಬಹುದೆಂದು ಯಾರು ಕೂಡಾ ಭಾವಿಸಬೇಡಿ. ವೀರ ದೇಶಾಭಿಮಾನಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್ {ರ} ರವರಿಂದ ಹೋರಾಟದ ವೀರ್ಯವನ್ನು ಇಲ್ಲಿನ ಮುಸ್ಲಿಮರು ಪಡೆದು ಕೊಂಡಿದ್ದಾರೆ. ಅನ್ಯಾಯದ ವಿರುದ್ಧ ಸಮರ ನಡೆಸಿ ಹಕ್ಕುಗಳನ್ನು ಪಡೆದ ಇತಿಹಾಸ ನಮ್ಮ ಮುಂದಿದೆ. ಇಲ್ಲಿನವರಿಗೆ ಅದು ಗೊತ್ತಿರುವುದರಿಂದ ಈ ಹೋರಾಟವು ಮುಂದುವರಿಯುತ್ತಲೇ ಇರುವುದನ್ನು ನಿರೀಕ್ಷಿಸಬಹುದು. ನ್ಯಾಯ ಸಿಗುವ ತನಕ, ವಿಜಯ ಪತಾಕೆಯನ್ನು ಹಾರಿಸುವ ತನಕ..!

error: Content is protected !! Not allowed copy content from janadhvani.com