janadhvani

Kannada Online News Paper

ಪುಸ್ತಕ ಖರೀದಿ, ಶುಲ್ಕ ಪಾವತಿಗೆ ಶಾಲೆಗಳಿಂದ ಒತ್ತಡ- ಪಾಲಕರ ಆಕ್ರೋಶ

ಬೆಂಗಳೂರು: ಪಠ್ಯಪುಸ್ತಕ ಖರೀದಿಸುವಂತೆ ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಖಾಸಗಿ ಶಾಲೆಗಳು ಪಾಲಕರಿಂದ ಶುಲ್ಕ ವಸೂಲಿಗೆ ಮುಂದಾಗಿವೆ. ಶುಲ್ಕ ಪಾವತಿಸದಿದ್ದರೆ ಮಕ್ಕಳನ್ನು ಶಾಲೆಯಿಂದ ಹೊರದೂಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಶಾಲೆಗಳು ನೀಡುತ್ತಿವೆ.

ಕರೊನಾ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಸಹ ಅರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ಈ ಮಧ್ಯೆ ರಾಜ್ಯ ಪಠ್ಯಪುಸ್ತಕ ಸಂಘ ನಿಗದಿತ ಅವಧಿಯಲ್ಲಿ ಪುಸ್ತಕ ಖರೀದಿ ಮಾಡ ಬೇಕೆಂದು ಒತ್ತಡ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಆನ್ಲೈನ್ ತರಗತಿ, ಪಠ್ಯಪುಸ್ತಕ ಖರೀದಿ ಮಾರ್ಗದಲ್ಲೇ ಶಾಲೆಯ ವಾರ್ಷಿಕ ಶುಲ್ಕವನ್ನು ಪಾವತಿಸುವಂತೆ ಪಾಲಕರಿಗೆ ಸೂಚನೆ ನೀಡಿವೆ.

ಖಾಸಗಿ ಶಾಲೆಗಳ ಈ ಬೆದರಿಕೆಯಿಂದ ಪಾಲಕರು ಕಂಗಾಲಾಗಿದ್ದಾರೆ. ಮೊದಲೇ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಬಹುತೇಕ ಪಾಲಕರು ಶುಲ್ಕ ಪಾವತಿಸಲು ಸಾಧ್ಯವಾಗದೇ ಅಸಹಾಯಕತೆಯಲ್ಲಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಶುಲ್ಕ ಕಡಿಮೆ ಮಾಡುವುದಿಲ್ಲ. ಬೇಕಾದರೆ ಕಂತು ಹೆಚ್ಚಿಸುತ್ತೇವೆಂದು ಆಡಳಿತ ಮಂಡಳಿಗಳು ಆಫರ್ ನೀಡಿವೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಆನ್ಲೈನ್ ಗ್ರೂಪ್ನಿಂದ ತೆಗೆದು ಹಾಕಿ ಶುಲ್ಕ ಪಾವತಿಸಿದವರಿಗೆ ಮಾತ್ರ ಆನ್ಲೈನ್ ಕ್ಲಾಸ್ ಮಾಡಲು ಕೆಲ ಶಾಲೆಗಳು ಮುಂದಾಗಿವೆ.

ಆರ್ಟಿಇ ಮಕ್ಕಳಿಗೂ ಶುಲ್ಕ: ಆರ್ಟಿಇ ಮಕ್ಕಳಿಗೆ ಈ ಬಾರಿ ಸರ್ಕಾರ ಪಠ್ಯಪುಸ್ತಕ ವಿತರಿಸಿಲ್ಲ. ಆದ್ದರಿಂದ ಆರ್ಟಿಇ ಮಕ್ಕಳು ಕೂಡ ಪಠ್ಯಪುಸ್ತಕದ ಜೊತೆಗೆ ಇನ್ನಿತರ ಶುಲ್ಕವನ್ನು ಪಾವತಿಸಬೇಕು ಎಂದು ಖಾಸಗಿ ಶಾಲೆಗಳು ತಾಕೀತು ಮಾಡುತ್ತಿವೆ. ಆರ್ಟಿಇ ಅಡಿ ಸೀಟು ಪಡೆದಿರುವ ಪಾಲಕರಿಗೆ ಈಗ ಸಾವಿರಾರು ರೂ. ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಆನ್ಲೈನ್ ತರಗತಿ ಹೆಸರಿನಲ್ಲಿಯೂ ಶುಲ್ಕ ಪಾವತಿಗೆ ಒತ್ತಡ ಹೇರುತ್ತಿವೆ.

ಸರ್ಕಾರ ಮಾತ್ರ ಇದ್ಯಾವುದು ತಿಳಿದೇ ಇಲ್ಲವೆಂಬಂತೆ ಮೌನವಹಿಸಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್ಡೌನ್ ಜಾರಿಯಲ್ಲಿರುವುದರಿಂದ ಬಹುತೇಕ ಪಾಲಕರು ಈಗಾಗಲೇ ತಮ್ಮ ಊರುಗಳಿಗೆ ಹೋಗಿದ್ದಾರೆ. ಈ ವೇಳೆ ಶುಲ್ಕ ಪಾವತಿಸುವಂತೆ ಮೊಬೈಲ್ಗೆ ಸಂದೇಶ ರವಾನೆ ಮಾಡುತ್ತಿರುವುದು ಪಾಲಕರಿಗೆ ಕಿರಿಕಿರಿ ಉಂಟುಮಾಡಿದೆ. ಬಡವರ ಪರಿಸ್ಥಿತಿ ಅರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಪಾಲಕರು ಆಗ್ರಹಿಸಿದ್ದಾರೆ

error: Content is protected !! Not allowed copy content from janadhvani.com