janadhvani

Kannada Online News Paper

ಕೋವಿಡ್ 19 – ಇಮ್ಯೂನ್ ಪಾಸ್ ಪೋರ್ಟ್ ಬಗ್ಗೆ ಒಂದಿಷ್ಟು ಮಾಹಿತಿ

ಇದು ಸಖತ್ ಇಂಟರೆಸ್ಟಿಂಗ್ ಸ್ಟೋರಿ. ತಪ್ಪದೇ ಓದಿ. ಸಾಧ್ಯವಾದರೆ ಶೇರ್ ಮಾಡಿ. ಬೇರೆ ದೇಶಕ್ಕೆ ಹೋಗೋದಕ್ಕೆ ನಮಗೆ ಪಾಸ್ ಪೋರ್ಟ್ ಬೇಕಲ್ಲ. ಅದೇ ರೀತಿ ನಾವು ಕರೋನಾಮುಕ್ತರಾಗಿದ್ದೇವೆ ಎಂದು ಮಾಸ್ಕ್ ಕಿತ್ತೆಸೆದು ತಿರುಗಾಡಲು ಒಂದು ‘ಇಮ್ಯೂನ್ ಪಾಸ್ ಪೋರ್ಟ್’ ಇದ್ದರೆ ಹೇಗೆ? ನಿಮ್ಮಲ್ಲಿ ಹಲವರಿಗಾದರೂ ಈ ಇಮ್ಯೂನ್ ಪಾಸ್ ಪೋರ್ಟ್ ಏನೆಂಬುದು ಗೊತ್ತಿರಬಹುದು. ಗೊತ್ತಿಲ್ಲದವರಿಗಾಗಿ ಈ ಬರೆಹ. ಇದನ್ನು ಬರೆಯುವ ಮೂಲಕ ನಾನೂ ಸಹ ಇಮ್ಯೂನ್ ಪಾಸ್ ಪೋರ್ಟ್ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಇವತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕಂಟೇನ್ ಮೆಂಟ್ ಜೋನ್ ಗಳಲ್ಲಿ ಆಂಟಿಜನ್ ಟೆಸ್ಟ್ ಮಾಡುವುದಾಗಿ ಹೇಳಿದರೆಂಬ ಮಾತು‌ ಕಿವಿಗೆ ಬಿತ್ತು. ಆಂಟಿಜನ್ ಎಂದರೆ ದೇಹದಲ್ಲಿ ಆಂಟಿಬಾಡೀಸ್ ಗಳನ್ನು ಸೃಷ್ಟಿಸುವ ಕಣಗಳು. ಕರೋನಾ ನಿಮಗೆ ಬಂದಿದ್ದರೆ ನಿಮ್ಮಲ್ಲಿ ಆಂಟಿಬಾಡೀಸ್ ಉತ್ಪತ್ತಿಯಾಗಿರುತ್ತದೆ. ವೈರಸ್ ಇದೆಯೋ ಇಲ್ಲವೋ ಎಂದು ಕಂಡುಹಿಡಿಯಲು ಇದು ಸುಲಭ‌ ವಿಧಾನ. ಇದರ ಜತೆಗೆ ಆಂಟಿಬಾಡೀ ಪರೀಕ್ಷೆಗಳು ನಡೆದರೆ?

ಹಿಂದೊಮ್ಮೆ ನಾನೇ ಬರೆದಿದ್ದೆ, ಕರೋನಾ ಬಂದು‌ಹೋದವರೇ ಪುಣ್ಯವಂತರು ಅಂತ. ಅದು ವಿಪರೀತಾರ್ಥದಲ್ಲಿ ನಿಜವಾಗುತ್ತಿದೆ. ಕಂಟೇನ್ ಮೆಂಟ್ ಜೋನ್ ಗಳಲ್ಲಿ ಆಂಟಿಬಾಡೀಸ್ ಟೆಸ್ಟ್ ನಡೆದರೆ, ಅಲ್ಲಿನ ಜನರು ನಿರಾಳರಾಗುತ್ತಾರೆ. ಆಗ ನಿರುಮಳ್ಳವಾಗಿರುವ ಬಡಾವಣೆಗಳು ನಿಜವಾದ ಅರ್ಥದಲ್ಲಿ ಕಂಟೇನ್ ಮೆಂಟ್ ಜೋನ್ ಗಳಾಗುತ್ತವೆ. ಎಲ್ಲಿಗೆ ಕರೋನಾ ಇನ್ನೂ ಹಬ್ಬಿಲ್ಲವೋ ಆ ಏರಿಯಾಗಳು ಡೇಂಜರ್ ಜೋನ್ ಆಗಿಬಿಡುತ್ತವೆ. ಚಕ್ರ ತಿರುಗುವುದೆಂದರೆ ಇದೇನೇ!

ಇದೆಲ್ಲ ಶುರುವಾಗಿದ್ದು ಸ್ವೀಡನ್ ನಲ್ಲಿ. ಯೂರೋಪಿನ ನಾನಾ ದೇಶಗಳು ಈಗ ಈ ‘ಇಮ್ಯೂನ್ ಪಾಸ್ ಪೋರ್ಟ್’ ಹಿಂದೆ ಬಿದ್ದಿವೆ. ಕಾರಣ ಸ್ಪಷ್ಟ. ಕರೋನಾ ಕಾರಣಕ್ಕೆ ಈಗಾಗಲೇ ಎಲ್ಲ ದೇಶಗಳು ಆರ್ಥಿಕವಾಗಿ ನಲುಗಿಹೋಗುತ್ತಿವೆ. ಇನ್ನಷ್ಟು ನಷ್ಟ ಮಾಡಿಕೊಳ್ಳುವ ಶಕ್ತಿ ಅವುಗಳಿಗೆ ಇಲ್ಲ. ಎಕಾನಮಿಯನ್ನು ಹಳಿಗೆ ತರಬೇಕೆಂದರೆ ಜನರು ಎಂದಿನಂತೆ ಕೆಲಸ ಕಾರ್ಯಗಳಲ್ಲಿ‌ ತೊಡಗಿಕೊಳ್ಳುವಂತಾಗಬೇಕು. ಬಜಾರಿನಲ್ಲಿ ಹಣ ಹರಿಯಬೇಕು. ಆದರೆ ಅಡ್ಡ ಕುಳಿತಿರುವುದು ಕರೋನಾ. ಅದನ್ನು ‌ನಿಜವಾಗಿಯೂ ತಡೆಯಲು ಸಾಧ್ಯವಿರೋದು ವ್ಯಾಕ್ಸಿನ್ ನಿಂದ ಮಾತ್ರ. ಆದರೆ ಅದಕ್ಕೆ ಕನಿಷ್ಠ ಆರು ತಿಂಗಳಾದರೂ ಬೇಕು, ಜನರನ್ನು ತಲುಪಲು ವರ್ಷದ ಮೇಲಾಗಬಹುದು. ಅಲ್ಲಿಯವರೆಗೆ ಏನು ಮಾಡೋದು? ಆಗ‌ ಹುಟ್ಟಿಕೊಂಡಿದ್ದೇ ಈ ‘ ಇಮ್ಯೂನ್ ಪಾಸ್ ಪೋರ್ಟ್’ ಕಲ್ಪನೆ.

ಕರೋನಾ ಈಗಾಗಲೇ ಸಮುದಾಯಕ್ಕೆ ಹರಡಿದೆ. ಅದನ್ನು ತಡೆಗಟ್ಟುವುದು ನಮ್ಮಿಂದ ಸಾಧ್ಯವಾಗಲಿಲ್ಲ. ಕರೋನಾ ಲಭ್ಯ ಅಂಕಿಅಂಶಗಳ ಪ್ರಕಾರ ಶೇ. 95 ರಷ್ಟು asymptomatic ಆಗಿದೆ. ರೋಗಲಕ್ಷಣವಿಲ್ಲದೆ ಕರೋನಾ ಗೆದ್ದವರನ್ನು ಹುಡುಕಿ ತೆಗೆಯುವುದೇ ಆಂಟಿಬಾಡಿ ಟೆಸ್ಟ್ ಉದ್ದೇಶ. ಹೀಗೆ ಗೆದ್ದು ಬಂದವರೆಲ್ಲ ಹೊರಗೆ ಆರಾಮಾಗಿ ಓಡಾಡಲು, ಪ್ರಯಾಣ ಮಾಡಲು, ಮದುವೆ‌ ಮುಂಜಿ ಸಾವು ಇತ್ಯಾದಿಗಳಲ್ಲಿ ಭಾಗವಹಿಸಲು ಅರ್ಹರಾಗಿಬಿಡುತ್ತಾರೆ! ಅವರು ಮನೆಯಲ್ಲಿನ‌ ಲ್ಯಾಪ್‌ಟಾಪ್ ಮಡಿಚಿಟ್ಟು ನೆಮ್ಮದಿಯಾಗಿ ಕಚೇರಿಯಲ್ಲೇ ಕುಳಿತು ಕೆಲಸ ಮಾಡಬಹುದು! ಚಿಕ್ಕಪೇಟೆ ಮಾರ್ವಾಡಿಗಳು, ಕರೋನಾ ರೋಗಿಗಳೇ ವ್ಯಾಪಾರಕ್ಕೆ ಬಂದ್ರೂ ಚಿಂತೆಯಿಲ್ಲ,‌ ನಮ್ಮ ವ್ಯಾಪಾರ ನಾವು ಮಾಡಬಹುದು ಎಂದು ಅಂಗಡಿ ತೆಗೆದು ಕೂರಬಹುದು‌. ದೊಡ್ಡ ದೊಡ್ಡ ಶಾಲೆಗಳು ಇಮ್ಯೂನ್ ಪಾಸ್ ಪೋರ್ಟ್ ತಂದವರಿಗೆ ಪಾಠ ಹೇಳಬಹುದು. ಸೋಂಕು ಹಬ್ಬುವ ಭಯವಿಲ್ಲದೆ ಪೊಲೀಸರು ಅಪರಾಧಿಗಳ ಕೊರಳುಪಟ್ಟಿ ಹಿಡಿದು ಎಳೆದಾಡಬಹುದು!

ಒಂಚೂರು ಟೆಕ್ನಿಕಲ್ ಆಗಿ ವಿವರಿಸುವುದಾದರೆ, ವೈರಲ್ ಇನ್ಫೆಕ್ಷನ್ ನಂತರ ದೇಹದಲ್ಲಿ ಅದನ್ನು ಎದುರಿಸುವ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗುವುದಕ್ಕೆ ಒಂದರಿಂದ ಎರಡು ವಾರಗಳು ಹಿಡಿಯುತ್ತವೆ. ಮೊದಲ ಹಂತದಲ್ಲಿ ವೈರಸ್ ಹರಡುವಿಕೆಯನ್ನು ತಡೆಯುವ ಕಾರ್ಯವನ್ನು ನಮ್ಮ ದೇಹದೊಳಗಿನ ರಕ್ಷಣಾ ವ್ಯವಸ್ಥೆ ( ನ್ಯೂಟ್ರೋಫಿಲ್ಸ್, ಮ್ಯಾಕ್ರೋಫೇಜಸ್, ಡೆಂಡ್ರಿಟಿಕ್ ಕೋಶಗಳು) ಮಾಡುತ್ತವೆ. ಈ ಹಂತದಲ್ಲಿ ಈ ಹೋರಾಟದಿಂದಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಮುಂದಿನ ಹಂತದಲ್ಲಿ ಇಮ್ಯುನೋಗ್ಲೋಬಿನ್ಸ್ ಸೃಷ್ಟಿಯಾಗಿ ವೈರಸ್ಸನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ದೇಹದಲ್ಲಿ ಟಿ- ಸೆಲ್ ಗಳು ಸೃಷ್ಟಿಯಾಗಿ ವೈರಸ್ ನಿಂದ ಇನ್ಫೆಕ್ಷನ್ ಗೆ ಒಳಗಾದ ಇತರ ಕೋಶಗಳನ್ನೂ ನಾಶಪಡಿಸುತ್ತವೆ. ಇದನ್ನು ಅಡಾಪ್ಟಿವ್ ಮೆಶರ್ಸ್ ಎಂದು ಕರೆಯುತ್ತಾರೆ. ಬಹುಪಾಲು ಸಂದರ್ಭಗಳಲ್ಲಿ ಇದು ಮುಂದೆ ಬರಬಹುದಾದ ವೈರಸ್ಸನ್ನೂ ತಡೆಗಟ್ಟಲು ಶಕ್ತವಾಗಿರುತ್ತದೆ. ಇದನ್ನು ಹೇಗೆ ಕಂಡುಹಿಡಿಯುವುದೆಂದರೆ,‌ ಅದಕ್ಕೊಂದು ಬ್ಲಡ್ ಟೆಸ್ಟ್ ನಡೆಯಬೇಕು. ರಕ್ತದಲ್ಲಿ ಇರುವ ಆಂಟಿಬಾಡೀಸ್ ಗುರುತಿಸಬೇಕು, ಅಷ್ಟೇ ಮತ್ತೇನಿಲ್ಲ. ಫಲಿತಾಂಶಕ್ಕೂ ದಿನಗಟ್ಟಲೆ ಕಾಯಬೇಕಿಲ್ಲ, ಹದಿನೈದು ನಿಮಿಷದಲ್ಲಿ ನಿಮ್ಮ ಇಮ್ಯೂನ್ ಅಂಕಪಟ್ಟಿ ನಿಮ್ಮ ಕಣ್ಣ ಮುಂದಿರುತ್ತದೆ.

ಇದರ ಸಾಧಕ ಬಾಧಕಗಳೇನು ಅಂತನೂ ನೋಡಬೇಕಲ್ಲವೇ? ಇದರ ಬಹುದೊಡ್ಡ ಅಪಾಯವೆಂದರೆ ಇದು ಹೊಸಬಗೆಯ ವರ್ಣ ವ್ಯವಸ್ಥೆಯನ್ನು ಸೃಷ್ಟಿಸಬಹುದು! ಇಮ್ಯೂನ್ ಪಾಸ್ ಪೋರ್ಟ್ ಪಡೆದವರು ಪ್ರಥಮ ದರ್ಜೆ ನಾಗರಿಕರಾಗಿಬಿಡಬಹುದು. ಇದನ್ನು ಇನ್ನೂ‌ ವಿಸ್ತರಿಸಿ ಹೇಳೋದಾದರೆ ಭಾರತದಂಥ ದೇಶದಲ್ಲಿ ಇಂಥ ಯಾವುದೇ ಪ್ರಕ್ರಿಯೆಗಳ ಫಲಾನುಭವಿಗಳು ಹಣವಂತರು, ಮೇಲ್ವರ್ಗದವರೇ‌ ಆಗಿರುತ್ತಾರೆ. ಸರ್ಕಾರಗಳು ಕೂಡ ಇಂಥವರನ್ನೇ ಓಲೈಸುತ್ತದೆ. ಆ ಲೆಕ್ಕದಲ್ಲಿ ಇಮ್ಯೂನ್ ಪಾಸ್ ಪೋರ್ಟ್ ಗಳು ಬಹುಬೇಗ ಯಾರನ್ನು ತಲುಪುತ್ತವೆ ಎಂದು ನೀವು ಸುಲಭವಾಗಿ ಊಹಿಸಬಹುದು. ಇದರ ಜತೆಜತೆಗೆ ಆರೋಗ್ಯವಂತರೆನಿಸಿಕೊಂಡವರ ಒಂದು ವರ್ಗ, ರೋಗದ ಕೋಳಿಗಳೆನಿಸಿಕೊಳ್ಳುವ ಇನ್ನೊಂದು ವರ್ಗ ಸೃಷ್ಟಿಯಾಗುತ್ತದೆ. ಒಬ್ಬರು ಎಲ್ಲದರ ಫಲಾನುಭವಿಗಳಾದರೆ ಇನ್ನೊಬ್ಬರು ಅವಕಾಶವಂಚಿತರಾಗುತ್ತಾರೆ.

ಇಮ್ಯೂನ್ ಪಾಸ್ ಪೋರ್ಟ್ ಎಂಬುದು ಪರ್ಮನೆಂಟ್ ಆಗಿರಲು ಸಾಧ್ಯವಿಲ್ಲ ಎಂದು ಈಗಾಗಲೇ ವೈರಾಲಜಿಸ್ಟ್ ಗಳು ಎಚ್ಚರಿಸುತ್ತಿದ್ದಾರೆ. ಅದರರ್ಥ, ಮನುಷ್ಯನ ದೇಹ ಒಂದೇ ರೀತಿ ಇರಲು ಸಾಧ್ಯವೇ? ಈ ಪಾಸ್ ಪೋರ್ಟ್ ಅವಧಿ ಮೂರು ತಿಂಗಳಿನದಾ? ಆರು ತಿಂಗಳಿನದಾ? ವರ್ಷದ್ದಾ? ಯಾರಿಗೆ ಗೊತ್ತು? ಅದನ್ನು ಯಾವುದೇ ಸರ್ಕಾರಿ ಸೀಲು ಹೇಳಲು ಹೇಗೆ ಸಾಧ್ಯ? ಕರೋನಾ‌ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಜಗತ್ತಿನಾದ್ಯಂತ ಹರಡಿದೆ. ಇಂಡಿಯಾದಲ್ಲಿ ಇಮ್ಯುನಿಟಿ ಪಡೆದವನು ಅಮೆರಿಕದಲ್ಲಿ ಸರ್ವೈವ್ ಆಗಲು ಸಾಧ್ಯವೇ? ಇದು ಮುಖ್ಯ ಪ್ರಶ್ನೆ. ಕರೋನಾ ಸೆಕೆಂಡ್ ವೇವ್ ಬಂತು ಅಂದಿಟ್ಟುಕೊಳ್ಳಿ, ಅದರ ಗುಣಲಕ್ಷಣಗಳೇ ಬೇರೆ ಇರುತ್ತವೆ. ಮೊದಲ ಹಂತದಲ್ಲಿ ಕರೋನಾ ಗೆದ್ದವನು ಎರಡನೇ ಹಂತದಲ್ಲೂ ಗೆಲ್ಲುತ್ತಾನೆಂದು ಹೇಗೆ ಹೇಳುವುದು. ಎಸ್ ಎಸ್ ಎಲ್ ಸಿಯಲ್ಲಿ ಫರ್ಸ್ ಕ್ಲಾಸಲ್ಲಿ ಪಾಸಾದವರು ಪಿಯುಸಿಯಲ್ಲಿ ಡುಮುಕಿ ಹೊಡೆದ ಉದಾಹರಣೆಗಳಿಲ್ಲವೇ?

ಈ ವಿಷಯದ ಕುರಿತು WHO ಏನು ಹೇಳುತ್ತದೆ ಎಂಬುದೂ ಕುತೂಹಲಕಾರಿ. ಅದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದೆ. ಇಮ್ಯೂನ್ ಟೆಸ್ಟಿಂಗ್ ಮಾಡುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಅದರಿಂದ ಸಾರ್ಸ್ ಕೋವಿಡ್ 19 ಯಾವ ಪ್ರಮಾಣದಲ್ಲಿ ಹರಡಿದೆ ಎಂಬ ಅಂಕಿಅಂಶಗಳು ದೊರೆಯುತ್ತವೆ. ಆದರೆ ಇದು ಒಬ್ಬ ವ್ಯಕ್ತಿ ಕರೋನಾ ಮುಕ್ತನೆಂದು ಹೇಳಲು ಸಾಕಾಗುವುದಿಲ್ಲ. ಕೆಲವರಲ್ಲಿ ಇನ್ಫೆಕ್ಷನ್ ಆದ ನಂತರ ಬಹಳ ದುರ್ಬಲವಾದ ಪ್ರಮಾಣದಲ್ಲಿ ಆಂಟಿಬಾಡೀಸ್ ಉತ್ಪತ್ತಿಯಾಗಿರಬಹುದು. ಎರಡನೆ ಬಾರಿ ಸೋಂಕು ತಗುಲಿದರೆ ಅವರು ಸಮಸ್ಯೆಗೆ ಸಿಕ್ಕಿಕೊಳ್ಳಬಹುದು ಎಂದು ಅದು ಹೇಳುತ್ತದೆ.

ಆದರೆ ಜಗತ್ತು ಅವರಸರಕ್ಕೆ ಬಿದ್ದಿದೆ. ಕರೋನಾದಿಂದ ಹೊರಬರುವುದಕ್ಕೆ ಈಗ ನಮಗೆ ದಾರಿಗಳು ಬೇಕು. ಎಷ್ಟೋ ದೇಶಗಳು ಕಮ್ಯುನಿಟಿ ಸ್ಪ್ರೆಡ್ ಆಗಿಯೇ ಬೇಗ ಇದರಿಂದ ಮುಕ್ತಿ ಸಿಗಲಿ ಎಂದು ಭಾವಿಸಿವೆ. ಬ್ರೆಜಿಲ್ ಅಧ್ಯಕ್ಷ ಇದನ್ನು ಬಾಯಿಬಿಟ್ಟೇ ಹೇಳಿದ್ದಾನೆ. ಕೇಳೋದಕ್ಕೆ ಇದು ಕ್ರೂರವಾಗೇ ಇದೆ. Survival of the Fittest ಥಿಯರಿ ಪದೇ ಪದೇ ಓದಿಕೊಂಡಿದ್ದೀವಲ್ಲ ನಾವು. ವಿಕಾಸವಾದದ‌ ಇನ್ನೊಂದು ಸ್ವರೂಪವಿದು. If you can’t beat them, join them…. That’s it! ಕರೋನಾ ಕಮ್ಯುನಿಟಿಗೆ ಹರಡಿದಷ್ಟೂ ಇಮ್ಯೂನ್ ಟೆಸ್ಟ್ ಮಾಡುವುದು ಸಲೀಸು, ಒಂದು ದೊಡ್ಡ ಜನಸಂಖ್ಯೆಗೆ ಮುಕ್ತ ಮುಕ್ತ ಸರ್ಟಿಫಿಕೇಟ್ ಕೊಡುವುದೂ ಸುಲಭ. ಒಂದು ದೊಡ್ಡ ಸಮುದಾಯ ಮತ್ತೆ ಎಂದಿನಂತೆ ಕೆಲಸ ಕಾರ್ಯಗಳಿಗೆ ತೊಡಗಿದರೆ ಮುಕ್ಕಾಲುಭಾಗ ಸಮಸ್ಯೆಗಳು ಬಗೆಹರಿದಂತೆಯೇ ಅಲ್ಲವೇ? ಹೀಗಾಗಿ ಮುಂದುವರೆದ ದೇಶಗಳು ನೂರಕ್ಕೆ ನೂರು ಫಲಕಾರಿ ಅಲ್ಲದಿದ್ದರೂ ಇಮ್ಯೂನ್ ಪಾಸ್ ಪೋರ್ಟ್ ಹಿಂದೆ ಬಿದ್ದಿವೆ.

ಕರ್ನಾಟಕದ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಔಟ್ ಲುಕ್ ಪತ್ರಿಕೆಗೆ ನೀಡಿದ ಮಾಹಿತಿ ಪ್ರಕಾರ, ಒಟ್ಟು ಒಂದು ಲಕ್ಷ ಆಂಟಿಜನ್ ಪರೀಕ್ಷೆಯ ಕಿಟ್ ಗಳು ರಾಜ್ಯಕ್ಕೆ ಬಂದಿವೆ. ಶನಿವಾರದಿಂದಲೇ ಪರೀಕ್ಷೆಗಳು ಶುರುವಾಗುತ್ತವೆ. ಬೆಂಗಳೂರಿಗೆ 50,000 ಉಳಿದ ಜಿಲ್ಲೆಗಳಿಗೆ 50,000. ಮೊದಲ ಹಂತದಲ್ಲಿ ಇಪ್ಪತ್ತು ಸಾವಿರ ಪರೀಕ್ಷೆಗಳನ್ನು ನಡೆಸಲಾಗುವುದಂತೆ. ಇದೊಂಥರ ದೂದ್ ಕಾ ದೂದ್, ಪಾನೀ ಕಾ ಪಾನೀ ಪರೀಕ್ಷೆ. ಆಂಟಿಜನ್ ಪರೀಕ್ಷೆ ಶುರುವಾಗುತ್ತಿದ್ದಂತೆ, ಕರೋನಾ ಸೋಂಕಿತರ ಸಂಖ್ಯೆ ಭರಭರನೆ ಮೇಲೆ ಏರಲಿದೆ. ಅದಕ್ಕೆ ಗಾಬರಿ ಪಡುವ ಅಗತ್ಯವಿಲ್ಲ. ಈ ರ‌್ಯಾಂಡಮ್ ಟೆಸ್ಟಿಂಗ್ ನಿಂದ ಪತ್ತೆಯಾಗುವ ಸೋಂಕಿತರು ರೋಗಲಕ್ಷಣವಿಲ್ಲದ, ಚಿಕಿತ್ಸೆ ಅಗತ್ಯವೂ ಇಲ್ಲದ ಜನರೇ ಆಗಿರುತ್ತಾರೆ.

ನಮ್ಮ ರಾಜ್ಯವನ್ನು ಹೊರತುಪಡಿಸಿದರೆ ದೆಹಲಿ‌ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಆಂಟಿಜನ್ ಟೆಸ್ಟ್ ಗಳಿಗೆ ಮುಂದಾಗಿದೆ. ಮುಂದೆ ಇತರ ರಾಜ್ಯಗಳೂ ಅದನ್ನು ಅನುಸರಿಸಬಹುದು. ಮುಂದೆ ಆಂಡಿಬಾಡೀಸ್ ಪರೀಕ್ಷೆಗಳು ನಮ್ಮಲ್ಲೂ ಶುರುವಾಗಿ ಇಲ್ಲೂ ಕೂಡ ಇಮ್ಯೂನ್ ಪಾಸ್ ಪೋರ್ಟ್ ವ್ಯವಸ್ಥೆ ಬಂದರೂ ಬರಬಹುದು. ಒಂದು ದೊಡ್ಡ ಅನುಕೂಲವೆಂದರೆ ಈ ಪರೀಕ್ಷೆಗೆ ಒಳಪಟ್ಟು ಪಾಸಾದವರು ದೊಡ್ಡ ನಿಟ್ಟುಸಿರು‌ ಬಿಟ್ಟು ಕರೋನಾ ಭೀತಿಯಿಂದ ಪಾರಾಗಬಹುದು. ಆದರೆ ಈ ಭೀತಿಮುಕ್ತಗೊಳಿಸುವ ಈ ಪ್ರಕ್ರಿಯೆಯಲ್ಲೂ ಸಾಮಾಜಿಕ ತಾರತಮ್ಯಗಳು ನಡೆದರೆ? ಕರೋನಾಗೂ ಮದ್ದು ಕಂಡುಹಿಡಿಯಬಹುದು, ನಮ್ಮ ರೋಗಗ್ರಸ್ಥ ವ್ಯವಸ್ಥೆಯ ಸಾಮಾಜಿಕ ಅಸಮಾನತೆಯ ವೈರಸ್ಸುಗಳಿಗೆ ಮದ್ದು ಕಂಡು ಹಿಡಿಯಲು ಸಾಧ್ಯವೇ?

– ದಿನೇಶ್ ಕುಮಾರ್ ಎಸ್.ಸಿ.

error: Content is protected !! Not allowed copy content from janadhvani.com