janadhvani

Kannada Online News Paper

ಕೊರೋನಾ ಮಧ್ಯೆ SSLC ಪರೀಕ್ಷೆ: ಪಟ್ಟು ಬಿಡದ ಸರ್ಕಾರ- ಸಕಲ ಸಿದ್ಧತೆ

ಎಸ್​ಎಸ್​ಎಲ್​​ಸಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್​, ಜೆಡಿಎಸ್​​ನ ಹಲವು ನಾಯಕರು ವಿರೋಧಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಪರೀಕ್ಷೆ ಯಾಕೇ? ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ ಈ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನೇ ತಾಳಲು ಸಾಧ್ಯವಿಲ್ಲವೇ? ವಿದ್ಯಾರ್ಥಿಗಳ ಜೀವನಕ್ಕಿಂತಲೂ ಪರಿಕ್ಷೆಯೇ ಮುಖ್ಯವೋ? ಎಕ್ಸಾಂ ಕ್ಯಾನ್ಸಲ್​ ಮಾಡಿ ಎಲ್ಲರನ್ನೂ ಯಾಕೇ ತೇರ್ಗಡೆ ಮಾಡಬಾರದು ಎಂದು ಪ್ರಶ್ನಿಸಿದ್ಧಾರೆ.

ಬೆಂಗಳೂರು: ದಿನೇ ದಿನೇ ಕೊರೋನಾ ಪ್ರಕರಣ‌ ಹೆಚ್ಚಾಗುತ್ತಿದ್ದರೂ ಎಸ್ ಎಸ್ ಎಲ್‌ಸಿ ಪರೀಕ್ಷೆ ಮಾಡಿಯೇ ಸಿದ್ಧ ಎಂದು ರಾಜ್ಯ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿದೆ. ಜೂನ್ 25 ರಿಂದ ಜುಲೈ 4 ರ ವರೆಗೆ ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸ್ ಮಾಡಿದ್ದು, ಸಾಮಾಜಿಕ ಅಂತರದ‌ ಮಾರ್ಕ್ ಕೂಡ ಮಾಡಿದ್ದಾರೆ. ಕಂಟೈನ್​ಮೆಂಟ್ ಝೋನ್ ಗಳಲ್ಲಿ ಪರೀಕ್ಷಾ ಕೇಂದ್ರ ರದ್ದು ಮಾಡಿ ಬೇರೆ ಕಡೆ ಪರ್ಯಾಯ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿದೆ.

ಲಾಕ್ ಡೌನ್ ನಂತರ ಬಾಕಿ ಉಳಿದಿದ್ದ ಪಿಯುಸಿ ದ್ವಿತೀಯ ಇಂಗ್ಲಿಷ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಬಳಿಕ ರಾಜ್ಯ ಸರ್ಕಾರ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡಿಯೇ ಸಿದ್ಧ ಎಂದು ಮುಂದಾಗಿದೆ. ಕಳೆದೊಂದು ವಾರದಿಂದ ರಾಜ್ಯದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರು, ಬಳ್ಳಾರಿ ಹಾಗೂ ಗುಲಬರ್ಗಾ ಜಿಲ್ಲೆಗಳಲ್ಲಿ ಇದರ ಸಂಖ್ಯೆ ಇನ್ನು ಹೆಚ್ಚಳ ಕಂಡು ಬರುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹತ್ತು ಸಾವಿರ ಸಂಖ್ಯೆ ದಾಟುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದಾದ್ಯಂತ ಎಸ್ ಎಸ್ ಎಲ್‌ಸಿ ಎಂಟುವರೆ ಲಕ್ಷ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಲು ಮುಂದಾಗಿದೆ‌.

ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ರಾಜ್ಯದಾದ್ಯಂತ 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 4,48, 560 ಬಾಲಕರು ಹಾಗೂ 3,99,643 ಬಾಲಕಿಯರು ಇದ್ದಾರೆ. ರಾಜ್ಯದಲ್ಲಿ 2,879 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಿದ್ದು, ಕೋವಿಡ್ 19 ಹಿನ್ನೆಲೆ ಹೆಚ್ಚುವರಿ 330 ಬ್ಲಾಕ್ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಒಟ್ಟು 57 ಸೂಕ್ಷ್ಮ ಹಾಗೂ 4 ಅತೀ ಸೂಕ್ಷ್ಮ ಕೇಂದ್ರಗಳನ್ನು ಗುರುತು ಮಾಡಲಾಗಿದೆ. ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗಾಗಿ 12,674 ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ‌. ಇದರಲ್ಲಿ ಸಾರಿಗೆ ಹಾಗೂ ಶಾಲಾ ಕಾಲೇಜುಗಳ ವಾಹನಗಳು ಇವೆ. ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೆ ಪರೀಕ್ಷೆ ಜರುಗಲಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಕೆ ಮಾಡಿದೆ.

ಪರೀಕ್ಷಾ ಕೇಂದ್ರದಲ್ಲಿ ಜ್ವರ, ಕೆಮ್ಮು, ನೆಗಡಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ನಿಗಧಿ ಮಾಡಲಾಗಿದೆ. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರತಿ ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ಮಾತ್ರ ಅವಕಾಶ. ಕೆಲವು ಕೇಂದ್ರಗಳಲ್ಲಿ ಝೆಡ್ ಮಾದರಲ್ಲಿ ಟೇಬಲ್ ಮೇಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿದರೆ, ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ ಮಧ್ಯ ನಾಲ್ಕು ಅಡಿ ವ್ಯವಸ್ಥೆ ಮಾಡಲಾಗಿದೆ.‌

ಕಂಟೈನ್​ಮೆಂಟ್ ಜೋನ್ ಹಾಗೂ ಸೀಲ್ ಡೌನ್ ಗಳಲ್ಲಿ ಪರೀಕ್ಷಾ ಕೇಂದ್ರ ರದ್ದು ಮಾಡಿದ್ದು ಅಲ್ಲಿನ ವಿದ್ಯಾರ್ಥಿಗಳನ್ನ ಬೇರೆ ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾಹಿತಿ ನೀಡಿದೆ.

ರಾಜ್ಯದಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಫುಲ್ ಸ್ಯಾನಿಟೈಸ್ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಪ್ರೇ ಮಾಡಿ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರದಿಂದ ಪರೀಕ್ಷಾ ಕೊಠಡಿವರೆಗೆ ಸಾಮಾಜಿಕ ಅಂತರದ ಮಾರ್ಕ್ ಮಾಡಲಾಗಿದ್ದು, ಬರುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಅನಾರೋಗ್ಯವಿದ್ದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೇಂದ್ರ ವ್ಯವಸ್ಥೆ ಮಾಡಲಾಗಿದೆ. ರಾಜ್ಯಾದ್ಯಂತ ಕೊವಿಡ್ ಹೆಚ್ಚುವರಿ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 3,209 ಪರೀಕ್ಷಾ ಕೇಂದ್ರಗಳಲ್ಲಿ 5,755 ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗಿದ್ದು 5,758 ಆರೋಗ್ಯ ಸಹಾಯಕರ ನಿಯೋಜನೆ ಮಾಡಿದೆ.

ಇನ್ನು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಸ್ವಯಂಸೇವಕರು ಆರೋಗ್ಯ ತಪಾಸಣಾ ಸಹಾಯಕ್ಕೆ ನಿಯೋಜನೆ ಮಾಡಿದ್ದು, 6,418 ಸ್ವಯಂ ಸೇವಕರು ಆರೋಗ್ಯ ತಪಾಸಣೆ ಸಹಾಯಕರು ಇರಲಿದ್ದಾರೆ. ಸರ್ಕಾರದಿಂದ 7,511 ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇದ್ದು, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಪ್ರತ್ಯೇಕ ಥರ್ಮಲ್ ಸ್ಕ್ರೀನಿಂಗ್ ಮೆಷಿನ್‌ವ್ಯವಸ್ಥೆ ಮಾಡಲಾಗಿದೆ.‌ ಪರೀಕ್ಷಾ ಕೇಂದ್ರಗಳಲ್ಲಿ 6,500 ಸಹಾಯ ಕೇಂದ್ರದ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು, ಎಸ್​ಎಸ್​ಎಲ್​​ಸಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್​, ಜೆಡಿಎಸ್​​ನ ಹಲವು ನಾಯಕರು ವಿರೋಧಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಪರೀಕ್ಷೆ ಯಾಕೇ? ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ ಈ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನೇ ತಾಳಲು ಸಾಧ್ಯವಿಲ್ಲವೇ? ವಿದ್ಯಾರ್ಥಿಗಳ ಜೀವನಕ್ಕಿಂತಲೂ ಪರಿಕ್ಷೆಯೇ ಮುಖ್ಯವೋ? ಎಕ್ಸಾಂ ಕ್ಯಾನ್ಸಲ್​ ಮಾಡಿ ಎಲ್ಲರನ್ನೂ ಯಾಕೇ ತೇರ್ಗಡೆ ಮಾಡಬಾರದು ಎಂದು ಪ್ರಶ್ನಿಸಿದ್ಧಾರೆ.

ಜೂ.25 ರಿಂದ ಜುಲೈ 4 ರವರೆಗೆ ರಾಜ್ಯಾದ್ಯಂತ ಜರುಗಲಿರುವ ಪರೀಕ್ಷೆ ಜೂನ್ 25 ರಂದು ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ ಜೂನ್ 26 ರಂದು ಅರ್ಥಶಾಸ್ತ್ರ ಜೂನ್ 27ರಂದು ಗಣಿತ / ಸಮಾಜಶಾಸ್ತ್ರ, ಜೂನ್ 29 ರಂದು ವಿಜ್ಞಾನ / ರಾಜ್ಯಶಾಸ್ತ್ರ , ಜುಲೈ 1 ರಂದು ಸಮಾಜ ವಿಜ್ಞಾನ, ಜುಲೈ 2 ರಂದು ಕನ್ನಡ, ಜುಲೈ 3 ರಂದು ತೃತೀಯ ಭಾಷೆ ಹಿಂದಿ, ಜುಲೈ 4 ರಂದು ಜಿಟಿಎಸ್ ಪ್ರಾಯೋಗಿಕ ಹಾಗು ಮೌಖಿಕ ಪರೀಕ್ಷೆ ಆಯಾ ಕೇಂದ್ರದಲ್ಲಿ ಜರುಗಲಿದೆ.

error: Content is protected !! Not allowed copy content from janadhvani.com