janadhvani

Kannada Online News Paper

ಸಚಿವ ಸಿಟಿ ರವಿ ರೊಂದಿಗೆ ವೀಡಿಯೋ ಕಾನ್ಫರೆನ್ಸ್: ಅನಿವಾಸಿಗಳ ಸಮಸ್ಯೆಗೆ ಸ್ಪಂದಿಸಲು ಮನವಿ

ಅನಿವಾಸಿ ಕನ್ನಡಿಗರ ವಾಪಸಾತಿ ವಿಷಯವಾಗಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಸಚಿವರಾದ ಸನ್ಯಾನ್ಯ ಸಿಟಿ ರವಿ ಯವರೊಂದಿಗೆ ಜೂನ್ 20 ರಂದು ವೀಡಿಯೋ ಕಾನ್ಫರೆನ್ಸ್ ನಡೆಸಿತು.

ಮುಫೀದ್ ಬಜ್ಪೆಯವರ ಸ್ವಾಗತದೊಂದಿಗೆ ಆರಂಭಿಸಿದ ಕಾನ್ಫರೆನ್ಸ್ ನಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿಯವರು ಕೆಸಿಎಫ್ ನಡೆಸುವ ಕಾರ್ಯವೈಖರಿಗಳನ್ನು ಮಂತ್ರಿಗಳಿಗೆ ವಿವರಿಸಿದರು.

ನಂತರ ಮಾತನಾಡಿದ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಅನಿವಾಸಿಗಳು ಕೋವಿಡ್ ಕಾಲದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಮಂತ್ರಿಗಳ ಗಮನಕ್ಕೆ ತಂದರು. ಕಾಲಾವಧಿ ಮುಗಿದ ಪಾಸ್ ಪೋರ್ಟ್ ನವೀಕರಣ, ಊರಿಗೆ ಮರಳುವವರಿಗೆ ಕೋವಿಡ್ ಟೆಸ್ಟ್ ಶುಲ್ಕ ರಿಯಾಯಿತಿ, ಹೋಮ್ ಕೋರಂಟೈನ್ ವ್ಯವಸ್ಥೆ, ಕೆಲಸ ನಷ್ಟವಾಗಿ ಮರಳುವವರಿಗೆ ಸರಕಾರದಿಂದ ಸಣ್ಣ ವ್ಯಾಪಾರ , ಕಸುಬುಗಳಿಗೆ ಸಾಲ ಯೋಜನೆ, ವಿದೇಶದಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ಸಹಾಯ, ಕೋವಿಡ್ ಬಳಿಕ ವಿದೇಶಕ್ಕೆ ಮರಳಲು ತುರ್ತಾಗಿ ಸಾಕಷ್ಟು ವಿಮಾನ ಯಾನಗಳನ್ನು ಆರಂಭಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಸನ್ಮಾನ್ಯ ಸಿಟಿ ರವಿಯವರ ಗಮನಕ್ಕೆ ತರಲಾಯಿತು.

ಸದ್ಯ ಅನಿವಾಸಿಗಳಿಗೆ ಚಾರ್ಟೆಡ್ ವಿಮಾನಯಾನದ ವ್ಯವಸ್ಥೆ ನಡೆಸಲು ಕೆ.ಸಿ ಎಫ್ ಉದ್ದೇಶಿಸಿದ್ದು ಇದನ್ನು ಮುಖ್ಯ ಮಂತ್ರಿ ಯವರ ಗಮನಕ್ಕೆ ತಂದು ರಾಜ್ಯ ಸರಕಾರದ ಸಹಕಾರ ಮತ್ತು ಅನುಮತಿಗಾಗಿ ಮಂತ್ರಿಯವರೊಂದಿಗೆ ಮನವಿ ಮಾಡಲಾಯಿತು.

ಕೆ.ಸಿ ಎಫ್ ಮುಂದಿಟ್ಟ ಕಾರ್ಯಗಳ ಬಗ್ಗೆ ಸಚಿವರು ಪ್ರಸ್ತಾಪಿಸುತ್ತಾ ಅವುಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ಹಾಗೂ ಸರಕಾರದ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು. ಕೆಲಸ ನಷ್ಟವಾದವರಿಗೆ ಪರ್ಯಾಯ ವ್ಯವಸ್ಥೆಗಾಗಿ ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿ ಒಂದು Web portal ಆರಂಭಿಸಿ ಅದರಲ್ಲಿ ನೊಂದಾವಣೆ ಮಾಡಿದವರ ಕೌಶಲ್ಯಕ್ಕೆ ತಕ್ಕಂತೆ ಕೆಲಸ ನೀಡುವ ಬಗ್ಗೆ ಆಲೋಚಿಸಲಾಗುವುದು ಎಂದೂ ತಿಳಿಸಿದರು.

ಪ್ರಸ್ತುತ ಕಾನ್ಫರೆನ್ಸ್ ನಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಶೇಖ್ ಬಾವ ಮಂಗಳೂರು, ರಾಜ್ಯ ವಕ್ಫ್ ಸಮಿತಿ ಸದಸ್ಯರಾದ ಮೌಲಾನ ಶಾಫಿ ಸಅದಿ, ಕೆ.ಸಿ ಎಫ್ ಇಹ್ಸಾನ್ ಅದ್ಯಕ್ಷ ಅಬೂಬಕ್ಕರ್ ರೈಸ್ಕೋ, ನಝೀರ್ ಹಾಜಿ ಕಾಶಿಪಟ್ನ, ಸೌದಿ ರಾಷ್ಟ್ರೀಯ ಸಮಿತಿ ಪ್ರ. ಕಾರ್ಯದರ್ಶಿ ಸಾಲಿ ಬೆಳ್ಳಾರೆ, ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆ ಹಾಗೂ ಇನ್ನಿತರ ಸೌದಿ ಕೆ,ಸಿ ಎಫ್ ನ ರಾಷ್ಟ್ರೀಯ ನೇತಾರರು ಭಾಗವಹಿಸಿದರು.

error: Content is protected !! Not allowed copy content from janadhvani.com