janadhvani

Kannada Online News Paper

ರಾಜ್ಯಸಭಾ ಚುನಾವಣೆ-ಕರ್ನಾಟಕ, ಅರುಣಾಚಲ ಪ್ರದೇಶದಲ್ಲಿ ಅವಿರೋಧ ಆಯ್ಕೆ

ನವದೆಹಲಿ: ಮಧ್ಯಪ್ರದೇಶ, ಗುಜರಾತ್‌, ರಾಜಸ್ಥಾನ, ಮಣಿಪುರ ಸೇರಿದಂತೆ 8 ರಾಜ್ಯಗಳ ವಿಧಾನಸಭೆಯಿಂದ ರಾಜ್ಯಸಭಾ ಸೀಟುಗಳಿಗೆ ಮತದಾನ ಪ್ರಕ್ರಿಯೆ ನಡೆದಿದ್ದು ಫಲಿತಾಂಶ ಪ್ರಕಟವಾಗುತ್ತಿದೆ. ಕೊರೊನಾ ಸಂಕಷ್ಟದ ನಡುವೆ ನಡೆದ ಈ ಚುನಾವಣೆಯಲ್ಲಿ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಒಟ್ಟು 19 ಸೀಟುಗಳಿಗಾಗಿ ಮತದಾನ ನಡೆದಿದೆ. ಉಳಿದಂತೆ, ಕರ್ನಾಟಕ ಹಾಗೂ ಅರುಣಾಚಲ ಪ್ರದೇಶದಲ್ಲಿ ಅವಿರೋಧ ಆಯ್ಕೆ ನಡೆದಿದ್ದು, ಮತದಾನ ನಡೆಯುತ್ತಿರುವ ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನಷ್ಟೇ ಹೊರ ಬರಬೇಕಿದೆ.

ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಇವತ್ತೇ ಚುನಾವಣೆ ನಡೆಯಬೇಕಿತ್ತು. ಆದರೆ, ನಾಲ್ವರು ಅಭ್ಯರ್ಥಿಗಳು ಮಾತ್ರ ಸ್ಪರ್ಧಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಬಿಜೆಪಿಯಿಂದ ಅಶೋಕ್ ಗಸ್ತಿ, ಈರಣ್ಣ ಕಡಾಡಿ, ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್​ನಿಂದ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭೆ ಪ್ರವೇಶ ಗಿಟ್ಟಿಸಿದ್ಧಾರೆ. ಅರುಣಾಚಲ ಪ್ರದೇಶದಲ್ಲೂ ಬಿಜೆಪಿ ಅಭ್ಯರ್ಥಿ ನಬಮ್​ ರೆಬಿಯಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ 3, ಕಾಂಗ್ರೆಸ್​ 1 ಹಾಗೂ ಇತರೆ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ.

ಗುಜರಾತ್ ಮತ್ತು ಆಂಧ್ರ ಪ್ರದೇಶದಲ್ಲಿ ತಲಾ ನಾಲ್ಕು ಸ್ಥಾನಗಳು, ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ತಲಾ ಮೂರು ಸ್ಥಾನಗಳು, ಜಾರ್ಖಂಡ್​ನಲ್ಲಿ ಎರಡು ಹಾಗೂ ಮಣಿಪುರ, ಮಿಜೋರಾಂನಲ್ಲಿ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ರಾಜಸ್ಥಾನದಿಂದ ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ನೀರಜ್ ಡಾಂಗಿ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೊಟ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ, ಸಮರ್ ಸಿಂಗ್ ಸೋಲಂಕಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನಿಂದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಆಂಧ್ರ ಪ್ರದೇಶದಿಂದ ವೈಎಸ್‌ಆರ್‌ ಕಾಂಗ್ರೆಸ್‌ ಪ‍ಕ್ಷದ ನಾಲ್ವರೂ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ 2, ಕಾಂಗ್ರೆಸ್ 1 ಸ್ಥಾನಗಳನ್ನು ಗೆದ್ದುಕೊಂಡಿವೆ. ರಾಜಸ್ಥಾನದಿಂದ ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ 1ರಲ್ಲಿ ಜಯ ಸಾಧಿಸಿದೆ.

error: Content is protected !! Not allowed copy content from janadhvani.com