janadhvani

Kannada Online News Paper

ಕೆಸಿಎಫ್ ಸೌದಿ: ಅನಿವಾಸಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸಲು ಡಾ|ನಸೀರ್ ಹುಸೈನ್ ರಿಗೆ ಮನವಿ

ಕೋವಿಡ್-19 ಕಾರಣದಿಂದ ಅಂತರ್ರಾಷ್ಟ್ರೀಯ ವಿಮಾನಯಾನ ರದ್ದು ಗೊಂಡ ಹಿನ್ನೆಲೆಯಲ್ಲಿ ಹಲವಾರು ಕನ್ನಡಿಗರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಭಾರತ ಸರಕಾರದಿಂದ Vandebharatmission ಆರಂಭಗೊಂಡರೂ ಇದುವರೆಗೆ ಸೌದಿ ಅರೇಬಿಯಾದಿಂದ ಕರ್ನಾಟಕಕ್ಕೆ ಯಾವುದೇ ನೇರ ವಿಮಾನ ಆರಂಭಗೊಂಡಿಲ್ಲ.

ಇದರಿಂದಾಗಿ ಹಲವಾರು ಕನ್ನಡಿಗರು ಸೌದಿಯಲ್ಲಿ ಸಿಲುಕಿಕೊಂಡಿರುವ ವಿಷಯವನ್ನು ನೇರವಾಗಿ ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ರಾಜ್ಯಸಭೆಯ ಸದಸ್ಯರಾದ ಡಾ| ಸಯ್ಯಿದ್ ನಸೀರ್ ಹುಸ್ಸೈನ್ ರವರೊಂದಿಗೆ ಮೇ 27 ರಂದು ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಮನವಿ ಮಾಡಲಾಯಿತು.

ಈಗಾಗಲೇ ಸೌದಿ ಅರೇಬಿಯಾದಿಂದ ಸರಿಸುಮಾರು ಒಂದು ಲಕ್ಷದ ಎಂಬತ್ತು ಸಾವಿರ ಕನ್ನಡಿಗರು ಭಾರತದ ರಾಯಭಾರಿ ವೆಬ್‌ಸೈಟ್ ನಲ್ಲಿ ಭಾರತಕ್ಕೆ ವಾಪಾಸಾತಿಗೆ ಅರ್ಜಿ ಸಲ್ಲಿಸಿದ್ದರೂ ಕೇವಲ ಎಂಬತ್ತರಷ್ಟು ಕನ್ನಡಿಗರು ಮಾತ್ರ ಕನೆಕ್ಷನ್ ವಿಮಾನದ ಮೂಲಕ ಬೆಂಗಳೂರಿಗೆ ತಲುಪಿರುವುದು. ಇನ್ನು ಉಳಿದ ಕನ್ನಡಿಗರಲ್ಲಿ ಹಲವಾರು ಗರ್ಭಿಣಿಯವರು, ತುರ್ತು ಚಿಕಿತ್ಸೆ ಬೇಕಾದವರು, ವಯಸ್ಕರು, ಮಕ್ಕಳು ಹಾಗೂ ಸಂದರ್ಶನ ವಿಸಾದಲ್ಲಿ ಬಂದು ಸಿಲುಕಿದವರು, ಉದ್ಯೋಗ ನಷ್ಟವಾದವರು ಹಾಗೂ ಇನ್ನಿತರ ಕಾರಣಗಳಿಂದ ಅತ್ಯಾವಶ್ಯಕವಾಗಿ ಊರಿಗೆ ಹೋಗಬೇಕಾದವರು ಇದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇದುವರೆಗೆ ಸರಕಾರದಿಂದ ಸಕಾರಾತ್ಮಕವಾದ ಯಾವುದೇ ಸ್ಪಂದನೆ ಬರಲಿಲ್ಲ.

ಈ ವಿಷಯವನ್ನು ಕೇಂದ್ರ ಸರಕಾರದ ಮಂತ್ರಿಗಳು, ಸಂಸದರು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಅವರಿಂದ ಕೇವಲ ಭರವಸೆಗಳಲ್ಲದೇ ಇದುವರೆಗೆ ಯಾವುದೇ ವಿಮಾನಯಾನ ಆರಂಭಗೊಂಡಿಲ್ಲ. ಇದನ್ನೆಲ್ಲಾ ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನಕ್ಕೆ ತಂದು ಇದಕ್ಕೊಂದು ಪರಿಹಾರ ಒದಗಿಸಬೇಕಾಗಿ ಡಾ| ಸಯ್ಯಿದ್ ನಸೀರ್ ಹುಸ್ಸೈನ್ ರವರೊಂದಿಗೆ ಮನವಿ ಮಾಡಲಾಯಿತು.

ಇನ್ನು ಹಲವಾರು ಕನ್ನಡಿಗರು ಅವರ ಪಾಸ್ಪೋರ್ಟ್ ಕಾಲಾವಧಿ ಮುಗಿದು ಸಮಸ್ಯೆಯಲ್ಲಿದ್ದಾರೆ. ಅಂತವರ ಪಾಸ್ಪೋರ್ಟ್ ನವೀಕರಣಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಲು ಮನವಿ ಮಾಡಲಾಗಿದೆ. ಇದು ಮಾತ್ರವಲ್ಲದೇ ಕನ್ನಡಿಗರು ಅನುಭವಿಸುತ್ತಿರುವ ಇನ್ನೂ ಹಲವಾರು ಸಮಸ್ಯೆಗಳನ್ನು ನಸೀರ್ ಹುಸ್ಸೈನ್ ರವರ ಗಮನಕ್ಕೆ ತರಲಾಗಿದೆ.

ಎಲ್ಲಾ ತೊಂದರೆಗಳನ್ನು ಗಮನಿಸಿದ ಡಾ| ಸಯ್ಯಿದ್ ನಸೀರ್ ಹುಸ್ಸೈನ್ ರವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ವಿಮಾನಯಾನ ಸಚೀವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಡಿವಿ ಸದಾನಂದ ಗೌಡ ಹಾಗೂ ಇನ್ನಿತರ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ನನ್ನಿಂದಾಗುವ ರೀತಿಯಲ್ಲಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಕೆಸಿಎಫ್ ನಡೆಸುವ ಹೆಚ್ ವಿ ಸಿ ( ಹಜ್ಜ್ ಸ್ವಯಂ ಸೇವಕರ ತಂಡ) ಹಾಗೂ ಇನ್ನಿತರ ಸಾಂತ್ವನ ಕಾರ್ಯಗಳ ವಿವರಗಳನ್ನು ನೇತಾರರಿಂದ ಆಲಿಸಿದ ನಸೀರ್ ಹುಸ್ಸೈನ್ ರವರು ನಿಮ್ಮ ಸಾಂತ್ವನ ಕಾರ್ಯಗಳು ಶ್ಲಾಘನೀಯ ಹಾಗೂ ಇದನ್ನು ಮುಂದುವರಿಸುತ್ತಾ ಹೋಗಿ ನಿಮ್ಮೊಂದಿಗೆ ನಾನು ಇದ್ದೇನೆ ಎಂಬ ಭರವಸೆಯ ಮಾತುಗಳನ್ನಾಡಿದರು.

ಈ ಕಾನ್ಪರೆನ್ಸ್ ನಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯರಾದ ಮೌಲಾನಾ ಶಾಫೀ ಸಅದಿ, ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ, ಪ್ರ.ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸಅದಿ, ಇಹ್ಸಾನ್ ಇಲಾಖೆ ಅಧ್ಯಕ್ಷರಾದ ಅಬೂಬಕ್ಕರ್ ರೈಸ್ಕೋ, ಪಬ್ಲಿಶಿಂಗ್ ಇಲಾಖೆ ನೇತಾರರಾದ ನಝೀರ್ ಹಾಜಿ ಕಾಶಿಪಟ್ನ, ರಹೀಮ್ ಸಅದಿ ಕತ್ತರ್, ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್, ಪ್ರ.ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ, ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆ, KPCC NRI ಅಧ್ಯಕ್ಷರಾದ ಡಾ| ಅಬ್ದುಲ್ ಶಕೀಲ್, ಹಬೀಬ್ ಕೋಯ UAE, DKSC ಸೌದಿ ನೇತಾರರಾದ ಅಬ್ದುಲ್ ಹಮೀದ್, ಅಲ್-ಮದೀನಾ ಸಂಸ್ಥೆಯ ಸೌದಿ ರಾಷ್ಟ್ರೀಯ ಅಧ್ಯಕ್ಷರಾದ NS ಅಬ್ದುಲ್ಲಾ, ದಾರುಲ್ ಇರ್ಶಾದ್ ಸೌದಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್, MGA ನೇತಾರರಾದ ಅಬ್ದುಲ್ ಲತೀಫ್, ಕಾಂಗ್ರೆಸ್ ಸೌದಿ ಪೂರ್ವ ಪ್ರಾಂತ್ಯದ ಪ್ರ. ಕಾರ್ಯದರ್ಶಿ ರಫೀಕ್ ಕೆ ಹೆಚ್, ಉದ್ಯಮಿಗಳಾದ ಝಕರಿಯ್ಯಾ ಜೋಕಟ್ಟೆ, ನಝೀರ್ ಅಲ್-ಫಲಾಹ್, ಅಸ್ಕಾಫ್ ಅಬ್ದುಲ್ ಹಮೀದ್, ಅಶ್ರಫ್ ಕನ್ನಂಗಾರ್, ಅಮೀರ್ ಗೂಡಿನಬಳಿ, ಇಂತಿಯಾಝ್, ಜುನೈದ್, ಅಂಜದ್ ಖಾನ್ ಇನ್ನಿತರ ಉದ್ಯಮಿಗಳು ಹಾಗೂ ಕೆಸಿಎಫ್ ಸೌದಿ ಅರೇಬಿಯಾ ನೇತಾರರು ಭಾಗವಹಿಸಿದ್ದರು.

ಭಾಗವಹಿಸಿದ ಎಲ್ಲಾ ಉದ್ಯಮಿಗಳು ಹಾಗೂ ಹಿರಿಯರು ಕೆಸಿಎಫ್ ಕಾರ್ಯಾಚರಣೆಗಳನ್ನು ಮುಕ್ತಕಂಠದಿಂದ ಅಭಿನಂದಿಸಿದರು.

error: Content is protected !! Not allowed copy content from janadhvani.com