janadhvani

Kannada Online News Paper

ಅನಿವಾಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ ಯು.ಟಿ.ಖಾದರ್ ಜೊತೆ ಸಂವಾದ

ಜೆದ್ದಾ : ಅನಿವಾಸಿ ಕಾಂಗ್ರೆಸ್ ಕಾರ್ಯಕರ್ತರ ಹತ್ತು ಘಟಕಗಳ ಪ್ರತಿನಿಧಿಗಳೊಂದಿಗೆ ಒನ್ಲೈನ್ ಸಂವಾದ ಕಾರ್ಯಕ್ರಮ ಝೂಮ್ ಆಪ್ ನಲ್ಲಿ ಮಾಜಿ ಸಚಿವ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಜೊತೆ ಇತ್ತೀಚೆಗೆ ನಡೆಯಿತು.

ಕೋವಿಡ್-19 ಸಮಸ್ಯೆಯಿಂದಾಗಿ ವಿಮಾನ ಯಾನ ಇಲ್ಲದೇ ಇರುವುದರಿಂದ ಹಲವಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗರ್ಭಿಣಿಯರು, ಹಿರಿಯ ನಾಗರಿಕರು, ವೀಸಾ ಅವಧಿ ಮುಗಿದ ಮತ್ತು ಕೆಲಸ ಇಲ್ಲದೇ ಇರುವ ಹಲವಾರು ಮಂದಿ ಊರಿಗೆ ಹೋಗಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಆದ್ದರಿಂದ ಆದಷ್ಟು ಬೇಗ ಸೌದಿ ಅರೇಬಿಯಾದ ಜಿದ್ದಾದಿಂದ ಮಂಗಳೂರಿಗೆ ವಿಮಾನಯಾನ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲು ಮನವಿ ಮಾಡಲಾಯಿತು.

ಇದುವರೆಗೆ ಕೇವಲ ಭಾರತದ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಾವಣೆ ಕೆಲಸ ಬಿಟ್ಟರೆ ಇನ್ನೇನು ಮಾಹಿತಿ ಸಿಗಲಿಲ್ಲ ಮತ್ತು ಯಾವುದೇ ವಿಮಾನ ಹಾರಾಟದ ಮಾಹಿತಿ ಕೂಡ ಸಿಗಲಿಲ್ಲ. ಅದೇ ರೀತಿ ಮಂಗಳೂರಿಗೆ ದುಬೈಯಿಂದ ಬಂದಿದ್ದ ಮೊದಲ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದ ಅವ್ಯವಸ್ಥೆ ಮತ್ತು ಜಿಲ್ಲಾಡಳಿತದ ವಿಫಲತೆಯನ್ನು ಕೂಡ ಶಾಸಕರ ಗಮನಕ್ಕೆ ತಂದಾಗ ಮುಂದಿನ ದಿನಗಳಲ್ಲಿ ಅಂತಹ ಅವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ.

ಪಶ್ಚಿಮ ವಲಯದ ಸಂಯೋಜಕರಾದ ಕೆ.ಪಿ ಇಬ್ರಾಹಿಂ ಕಣ್ಣಂಗಾರ್ ಅವರ ನೇತೃತ್ವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹತ್ತು ಘಟಕಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

error: Content is protected !! Not allowed copy content from janadhvani.com