janadhvani

Kannada Online News Paper

ಹೊಸದಿಲ್ಲಿ: ಕೇಂದ್ರ ಸರಕಾರ ಮಂಗಳವಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದೆ.ದೈನಂದಿನ ಜೀವನಕ್ಕೆ ಅಗತ್ಯವಿರುವ ಮತ್ತಷ್ಟು ಚಟುವಟಿಕೆಗಳಿಗೆ ನಿರ್ಬಂಧಗಳಿಂದ ವಿನಾಯಿತಿ ಪ್ರಕಟಿಸಿದೆ. ಬುಕ್‌ ಸ್ಟಾಲ್‌, ಎಲೆಕ್ಟ್ರಾನಿಕ್‌ ಫ್ಯಾನ್‌ ಹಾಗೂ ಮೊಬೈಲ್‌ ರೀಚಾರ್ಜ್‌ ಅಂಗಡಿಗಳಿಗೆ ಸಡಿಲಿಕೆ ನೀಡಲಾಗಿದೆ.

ಶೈಕ್ಷಣಿಕ ಹಾಗೂ ಶಾಲಾ ಪಠ್ಯಪುಸ್ತಕಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿರಬಹುದು. ಎಲೆಕ್ಟ್ರಿಕ್‌ ಫ್ಯಾನ್‌ಗಳನ್ನು ಮಾರಾಟ ಮಾಡುವ ಅಂಗಡಿಗಳು ಹಾಗೂ ಮೊಬೈಲ್‌ ರೀಚಾಜ್‌ರ್‍ ಮಾಡುವ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಬಹುದು, ನಗರ ಪ್ರದೇಶಗಳಲ್ಲಿನ ಬ್ರೆಡ್‌ ಫ್ಯಾಕ್ಟರಿಗಳು, ಹಾಲು ಸಂಸ್ಕರಣಾ ಘಟಕಗಳು, ಫ್ಲೋರ್‌ಮಿಲ್‌ಗಳು ಕಾರ್ಯನಿರ್ವಹಿಸಬಹುದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಮನೆಗೆ ತೆರಳಿ ಹಿರಿಯ ನಾಗರಿಕರ ಆರೈಕೆಯಲ್ಲಿ ತೊಡಗಿಕೊಳ್ಳುವ ದಾದಿಯರಿಗೂ ವಿನಾಯಿತಿ ನೀಡಲಾಗಿದೆ. ಆದರೆ ಅಂಗಡಿ, ಕಾರ್ಖಾನೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಆದೇಶದಲ್ಲಿ ಸ್ಪಷ್ಪಪಡಿಸಲಾಗಿದೆ.

ಸಾರಿಗೆ ಮತ್ತಷ್ಟು ವಿಳಂಬ ಸಾಧ್ಯತೆ
ಮೇ 3ರಂದು ಲಾಕ್‌ಡೌನ್‌ ತೆರವುಗೊಳಿಸಿದರೂ ಬಸ್‌, ಮೆಟ್ರೊ, ರೈಲು, ವಿಮಾನ ಮೊದಲಾದ ಸಾರ್ವಜನಿಕ ಸಾರಿಗೆ ಸೇವೆ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಲಾಕ್‌ಡೌನ್‌ ತೆರವಿನ ನಂತರ ಕೆಲವು ತಿಂಗಳವರೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮನೆಯಿಂದ ಹೊರ ಬರುವಾಗ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲೂ ಸರಕಾರ ಚಿಂತನೆ ನಡೆಸಿದೆ

error: Content is protected !! Not allowed copy content from janadhvani.com