janadhvani

Kannada Online News Paper

ಅನಿವಾಸಿ ಕನ್ನಡಿಗರನ್ನು ಕೂಡಲೇ ಕರೆತರಲು ಮುಖ್ಯಮಂತ್ರಿಗೆ ಕೆಸಿಎಫ್(INC) ಮನವಿ

ಬೆಂಗಳೂರು,ಏ.18: ಕರ್ನಾಟಕ ಕಲ್ಚರಲ್ ಫೌಂಡೇಷನ್( ಕೆ.ಸಿ.ಎಫ್) ವಿದೇಶದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಆದಷ್ಟು ಬೇಗ ಸ್ವದೇಶಕ್ಕೆ ಕರೆತರುವಂತೆ ರಾಜ್ಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ.

ವಿಶ್ವಾದ್ಯಂತ ಕೋವಿಡ್-19 ದಿನೇನೆ ವ್ಯಾಪಿಸುತ್ತಿದೆ.ಆಯಾ ದೇಶಗಳು ಇದನ್ನು ತಡೆಗಟ್ಟಲು ಅವಿಶ್ರಾಂತ ಶ್ರಮ ವಹಿಸುತ್ತಲೂ ಇದೆ. ಆದರೂ ಅನಿಯಂತ್ರಿತವಾಗಿ ರೋಗವು ಭೀಕರವಾಗಿ ಹರಡುತ್ತಲೇ ಇದೆ.

ಭಾರತೀಯ ಮಾನವ ಸಂಪನ್ಮೂಲವಾಗಿದೆ ಭಾರತದ ಬಲು ದೊಡ್ಡ ಆರ್ಥಿಕತೆಯ ಅಡಿಪಾಯಗಳಲ್ಲೊಂದು, ಸ್ವದೇಶದಲ್ಲಿ ನೌಕರಿ ಇಲ್ಲದಿರುವಾಗ ವಿದೇಶಕ್ಕೆ ತೆರಳಿ ತನ್ನ ಮತ್ತು ಕುಟುಂಬದ ಬಡತನವನ್ನು ನೀಗಿಸುವುದರೊಂದಿಗೆ ಭಾರತದ ಆರ್ಥಿಕತೆಯನ್ನೂ ಅಭಿವೃದ್ಧಿಪಡಿಸುವ ಅನಿವಾಸಿ ಭಾರತೀಯರು, ರಾಷ್ಟ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ದೈನಂದಿನ ತೊಡಗಿಸಿಕೊಂಡವರಾಗಿದ್ದಾರೆ.

ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರಲ್ಲಿ ಕನ್ನಡಿಗರು ಗಣನೀಯ. ವಿಶೇಷವಾಗಿ ಕೊಲ್ಲಿ(ಗಲ್ಫ್) ಯಲ್ಲಿರುವ ಮಿಲಿಯನ್ ಕನ್ನಡಿಗರನ್ನು ಕೋವಿಡ್-19 ಹಬ್ಬುತ್ತಿರುವ ಹಿನ್ನಲೆಯಲ್ಲಿ ಕೂಡಲೇ ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಕಲ್ಪಿಸಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್) ರಾಜ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರಿಗೆ ಮನವಿಯನ್ನು ಸಲ್ಲಿಸಿದೆ.

ಕೊಲ್ಲಿ ರಾಷ್ಟ್ರಗಳಲ್ಲಿ ವಿವಿಧ ರಾಷ್ಟ್ರಗಳ ಲಕ್ಷಾಂತರ ಮಂದಿ ದುಡಿಯುತ್ತಿದ್ದಾರೆ. ಕೋವಿಡ್ ಅನಿಯಂತ್ರಿತವಾಗಿ ಹಬ್ಬುತ್ತಿರುವ ಕಾರಣ ಸ್ವದೇಶೀಯರು ವಿದೇಶೀಯರಿಗೆ ಚಿಕಿತ್ಸೆ ಒದಗಿಸುವುದು ಬಲು ದೊಡ್ಡ ಸವಾಲಾಗಿ ಪರಿಣಮಿಸುತ್ತಿರುವುದು ನಿಜ. ಹಲವು ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಈಗಾಗಲೇ ವಾಪಸ್ ಕರೆಸಿಕೊಂಡಿದೆ.

ಆದ್ದರಿಂದ ಕನ್ನಡಿಗರನ್ನು ಕರೆತರಲು ಸೂಕ್ತ ಸೌಲಭ್ಯವನ್ನು ಒದಗಿಸಿ, ತಲುಪಿದಾಕ್ಷಣ ತಾತ್ಕಾಲಿಕ ಕೋರಂಟೈನ್ ನಲ್ಲಿ ಇರಿಸಿ, ರೋಗವಿಲ್ಲವೆಂದು ಖಚಿತ ಪಡಿಸಿದ ಬಳಿಕ ಮನೆಗೆ ತೆರಳುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ವಿಸಿಟ್ ವೀಸಾದಲ್ಲಿ ತೆರಳಿದವರು, ಕುಟುಂಬ ಸಮೇತ ವಾಸಿಸುವವರು ವಿಮಾನ ಸ್ಥಗಿತಗೊಂಡ ಕಾರಣ ಸಿಲುಕಿರುತ್ತಾರೆ. ವಿಷೇಶ ವಿಮಾನದ ಮೂಲಕವಾದರೂ ವಿದೇಶದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಕರೆತರಲು ಕೇಂದ್ರ ಸರಕಾರವನ್ನು ಒತ್ತಾಯಿಸ ಬೇಕಿದೆ. ಸ್ವಂತ ಪ್ರಜೆಗಳ ಜೀವವು ವಿದೇಶದಲ್ಲಿ ಅಪಾಯದಲ್ಲಿರುವಾಗ ವಿಮಾನಯಾನವನ್ನು ಅನುಮತಿಸದಿರುವುದು ದುಃಖ ಸಂಗತಿಯಾಗಿದೆ. ಇದನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆರು ಕೊಲ್ಲಿ ರಾಷ್ಟ್ರಗಳು ಸಮೇತ ಲಂಡನ್, ಮಲೇಷ್ಯಾದಲ್ಲಿ ಕಾರ್ಯಾಚರಿಸುವ,ಸುಮಾರು 20 ಸಾವಿರದಷ್ಟು ಸದಸ್ಯರನ್ನೊಳಗೊಂಡ ಕೆ.ಸಿ.ಎಫ್ ಸಂಘಟನೆಯ ಪರವಾಗಿ ಈ ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ.

error: Content is protected !! Not allowed copy content from janadhvani.com