ಬೆಂಗಳೂರು: ಏ. 20ರಿಂದ ಲಾಕ್‌ಡೌನ್ ಸಡಿಲಿಸಿ, ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವ ತೀರ್ಮಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಜನಾದೇಶದ ಹಿನ್ನೆಲೆಯಲ್ಲಿ ಹಿಂದಿನ ಆದೇಶವನ್ನು ಹಿಂಪಡೆಯುವುದಾಗಿ ಸರ್ಕಾರ ಹೇಳಿದೆ.
ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಲಾಗಿದೆ. ಲಾಕ್‌ಡೌನ್ ಜಾರಿಯಲ್ಲಿ ಇರುವರೆಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ.
ಅಲ್ಲದೆ, ಐಟಿ ಬಿಟಿ ವಲಯದಲ್ಲಿ ಶೇ 33ರಷ್ಟು ಮಂದಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು ಎಂಬ ತೀರ್ಮಾನದಿಂದಲೂ ಹಿಂದೆಸರಿದಿರುವ ಸರ್ಕಾರ, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ. ಅಲ್ಲದೆ, ‘ವರ್ಕ್ ಫ್ರಮ್ ಹೋಂ‘ ವ್ಯವಸ್ಥೆ ಮುಂದುವರಿಯಲಿದೆ ಎಂದೂ ಹೇಳಿದೆ.
ಈ ಹಿಂದಿನ ನಿರ್ಧಾರ ಏನಾಗಿತ್ತು?
ಕೋವಿಡ್ 19 ನಿರ್ವಹಣೆ ಕುರಿತಂತೆ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಶನಿವಾರ ಮಧ್ಯಾಹ್ನ ಸಭೆ ನಡೆಸಿದ್ದ ಬಿಎಸ್ ಯಡಿಯೂರಪ್ಪ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಏಪ್ರಿಲ್ 20ರ ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಕಂಟೇನ್ಮೆಂಟ್ ಝೋನ್ ಗುರುತಿಸುವುದು ಮತ್ತು ಇತರ ಪ್ರದೇಶಗಳಲ್ಲಿ ಚಟುವಟಿಕೆ ನಿಯಂತ್ರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು’ ಎಂದಿದ್ದರು.
‘ಕಂಟೈನ್ಮೆಂಟ್ ಝೋನ್‌ನಲ್ಲಿ ಇನ್ಸಿಡೆಂಟ್ ಕಮಾಂಡರ್ ನೇಮಿಸಿ, ಅವರಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಲಾಗುವುದು. ಅಲ್ಲದೆ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ರಚಿಸಲಾಗುವುದು. ಅವರು ಕಂಟೈನ್ಮೆಂಟ್ ಝೋನ್‌ಗಳ ಮೇಲ್ಚಿಚಾರಣೆ ವಹಿಸಲಿದ್ದಾರೆ. ಈ ಪ್ರದೇಶದಲ್ಲಿ ಲಾಕ್ ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಯಾರೂ ಮನೆಯಿಂದ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು’ ಎಂದು ಹೇಳಿದ್ದರು.
‘ಐಟಿ ಬಿಟಿ ವಲಯಗಳಲ್ಲಿ ಶೇ 33 ರಷ್ಟು ಮಂದಿ ಕಚೇರಿಗಳಿಗೆ ಹಾಜರಾಗಲು ಅನುಮತಿ ನೀಡಲಾಗುವುದು. ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆ ಆರಂಭಿಸಲು ಅನುಮತಿ ನೀಡಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು ಹಾಗೂ ನಗರ ಪ್ರದೇಶದಲ್ಲಿ ಎಸ್ಇಝಡ್‌ಗಳು, ಕೈಗಾರಿಕಾ ವಸಾಹತುಗಳು, ಕೈಗಾರಿಕಾ ಟೌನ್ ಷಿಪ್‌ಗಳಲ್ಲಿ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದ್ದರು.
‘ಅಂತರ ಜಿಲ್ಲೆ ಪ್ರಯಾಣಕ್ಕೆ ಅವಕಾಶವಿಲ್ಲ. ಬೆಂಗಳೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕೈಗಾರಿಕೆಗಳ ಉದ್ಯೋಗಿಗಳ ಓಡಾಟದ ದೃಷ್ಟಿಯಿಂದ ಒಂದು ಜಿಲ್ಲೆಯಾಗಿ ಪರಿಗಣಿಸಲಾಗುವುದು. ಬಫರ್ ಝೋನ್ ನಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುವುದು. ಹಿರಿಯ ನಾಗರಿಕರು ಮನೆಯಿಂದ ಹೊರಬರಬಾರದು. ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲ ಕಡೆಗಳಲ್ಲಿ ಅಂತರ ಪಾಲನೆ ಕಡ್ಡಾಯ. ಉಗುಳುವುದನ್ನು ನಿಷೇಧಿಸಲಾಗಿದೆ. ಮೇ 3ರ ವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಮುಂದುವರೆಸಲಾಗುವುದು’ ಎಂದೂ ಅವರು ಹೇಳಿದ್ದರು