janadhvani

Kannada Online News Paper

ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮೇ ವೇಳೆಗೆ 13 ಲಕ್ಷ ಭಾರತೀಯರಿಗೆ ವೈರಸ್ ?

ನವದೆಹಲಿ, ಮಾ.25: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ 11 ಜನರು ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್​ನ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್​ಗೆ ಕರೆ ನೀಡಿದೆ. ಇದರ ನಡುವೆಯೇ ವಿಜ್ಞಾನಿಗಳ ತಂಡವೊಂದು ಶಾಕಿಂಗ್ ವಿಷಯ ಬಿಚ್ಚಿಟ್ಟಿದ್ದು, ಒಂದುವೇಳೆ ಇನ್ನೂ ಸರ್ಕಾರ ಎಚ್ಚೆತ್ತುಕೊಂಡು, ಸರಿಯಾದ ರೀತಿಯಲ್ಲಿ ಟೆಸ್ಟಿಂಗ್ ನಡೆಸದಿದ್ದರೆ ಮೇ ವೇಳೆಗೆ 13 ಲಕ್ಷಕ್ಕೂ ಹೆಚ್ಚು ಭಾರತೀಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಈಗಾಗಲೇ 520 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಕೊರೋನಾ ಶಂಕಿತರಿಗೆ ಸರಿಯಾದ ಟೆಸ್ಟಿಂಗ್ ಮಾಡುವಲ್ಲಿ ವಿಳಂಬ ಧೋರಣೆ ತಳೆದರೆ ಇಡೀ ದೇಶವನ್ನೇ ಆವರಿಸುವ ಕೊರೋನಾದಿಂದ ಜನರನ್ನು ಕಾಪಾಡುವುದು ಕಷ್ಟ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

COV-IND-19 ಅಧ್ಯಯನ ತಂಡದ ವಿಜ್ಞಾನಿಗಳು ಈ ಬಗ್ಗೆ ಆತಂಕಕಾರಿ ಸಂಗತಿಯನ್ನು ಹೊರಹಾಕಿದ್ದಾರೆ. ಭಾರತದಲ್ಲಿ ಟೆಸ್ಟಿಂಗ್ ಪ್ರಮಾಣ ಬಹಳ ಕಡಿಮೆಯಿದೆ. ದೇಶದಲ್ಲಿ ಕೊರೋನಾ ವೈರಸ್​ ಆತಂಕ ಮೂಡಿ 15ರಿಂದ 20 ದಿನಗಳೇ ಕಳೆದಿವೆ. ಆದರೂ ಮಾರ್ಚ್​ 18ರವರೆಗೆ ದೇಶದಲ್ಲಿ ಕೇವಲ 11,500 ಜನರಿಗೆ ಮಾತ್ರ ಕೊರೋನಾ ಟೆಸ್ಟಿಂಗ್ ಮಾಡಲಾಗಿದೆ. ಕೊರೋನಾ ವೈರಸ್​ಗೆ ಇನ್ನೂ ಯಾವುದೇ ಔಷಧಿಯನ್ನು ಕಂಡುಹಿಡಿಯದ ಕಾರಣ ಹಾಗೂ ಈಗಾಗಲೇ ಹಲವೆಡೆ 2ನೇ ಹಂತದಿಂದ 3ನೇ ಹಂತದ ಕಡೆಗೆ ಕೊರೋನಾ ವೈರಸ್​ ಹರಡುತ್ತಿರುವುದರಿಂದ ದೇಶದ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ.

ಅಮೆರಿಕ, ಇಟಲಿಯಂತಹ ದೇಶಗಳಲ್ಲಿ ಕೂಡ ಇದೇ ರೀತಿಯ ನಿರ್ಲಕ್ಷ್ಯ ಧೋರಣೆ ತಳೆದಿದ್ದರಿಂದಲೇ ಈಗ ಸಾವಿನ ಸಂಖ್ಯೆ ವಿಪರೀತಕ್ಕೆ ಹೋಗಿದೆ. ಕೊರೋನಾ ನಿಯಂತ್ರಣಕ್ಕೆ ಸಾಧ್ಯವೇ ಇಲ್ಲ ಎಂಬ ರಿಸ್ಥಿತಿ ಎದುರಾಗಿದೆ. ಭಾರತ ಕೂಡ ಈ ರೀತಿಯ ನಿರ್ಲಕ್ಷ್ಯ ತಳೆದರೆ ಮುಂದೆ ದೊಡ್ಡ ಬೆಲೆಯನ್ನೇ ತೆರಬೇಕಾದೀತು ಎಂಬುದು ಸಂಶೋಧಕರ ಎಚ್ಚರಿಕೆ. ಇಟಲಿ ಮತ್ತು ಅಮೆರಿಕದಲ್ಲಿ ಕೂಡ ಆರಂಭದಲ್ಲಿ ಟೆಸ್ಟಿಂಗ್ ವೇಳೆ ಇದೇ ಪ್ರಮಾಣದ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಇದೀಗ ಅಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ.

ಭಾರತದ ಆಸ್ಪತ್ರೆಗಳಲ್ಲಿ 1,000 ಜನರಿಗೆ ಕೇವಲ ಶೇ. 0.7ರಷ್ಟು ಬೆಡ್​ಗಳ ವ್ಯವಸ್ಥೆಯಿದೆ. ಫ್ರಾನ್ಸ್​ನಲ್ಲಿ ಈ ಪ್ರಮಾಣ ಶೇ. 6.5, ದಕ್ಷಿಣ ಕೊರಿಯಾದಲ್ಲಿ ಶೇ. 11.5, ಚೀನಾದಲ್ಲಿ ಶೇ. 4.2, ಇಟಲಿಯಲ್ಲಿ ಶೇ. 3.4, ಇಂಗ್ಲೆಂಡ್​ನಲ್ಲಿ ಶೇ. 2.9, ಅಮೆರಿಕದಲ್ಲಿ ಶೇ. 2.8 ಇದೆ. ಒಂದುವೇಳೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವಂತೆ ಇನ್ನೂ 21 ದಿನಗಳ ಕಾಲ ಇಡೀ ದೇಶವೇ ಲಾಕ್​ಡೌನ್ ಆದರೆ ಒಂದು ಮಟ್ಟಿಗೆ ಕೊರೋನಾ ಹರಡುವಿಕೆಯನ್ನು ತಡೆಗಟ್ಟಬಹುದು. ಆದರೆ, ಅಷ್ಟು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದೇ ಸದ್ಯಕ್ಕೆ ಇರುವ ಸವಾಲು.

ಕಳೆದ 100 ವರ್ಷಗಳಲ್ಲಿ ಕಾಣಿಸಿಕೊಂಡ ವೈರಸ್​ಗಳಲ್ಲಿ ಕೊರೋನಾ ವೈರಸ್​ ಅತ್ಯಂತ ಅಪಾಯಕಾರಿಯಾಗಿದೆ. ಕೊರೋನಾ ವೈರಸ್​ನಂತಹ ನಿರ್ಜೀವ ವೈರಸ್​ಗಳು ಮನುಷ್ಯರ ದೇಹದೊಳಗೆ ಹೊಕ್ಕ ಕೂಡಲೆ ತನ್ನ ಪ್ರಭಾವವನ್ನು ಅಲ್ಲಿ ಬಿತ್ತಿ, ಬೇರೊಬ್ಬರ ದೇಹವನ್ನು ಸೇರಲು ಸಿದ್ಧವಾಗಿರುತ್ತದೆ. ಇದರಿಂದಲೇ ಈ ಸಾಂಕ್ರಾಮಿಕ ರೋಗದಿಂದ ಸಮಸ್ಯೆಗಳು ಜಾಸ್ತಿ. ಇದು ಸರಪಳಿಯಂತೆ ಇರುವುದರಿಂದ ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುತ್ತದೆ.

ಕೊರೋನಾ ವೈರಸ್​ ಒಮ್ಮೆ ಮನುಷ್ಯರ ದೇಹವನ್ನು ಹೊಕ್ಕರೆ ಒಂದೇ ಒಂದು ಗಂಟೆಯೊಳಗೆ 10 ಸಾವಿರ ವೈರಸ್​ಗಳನ್ನು ಸೃಷ್ಟಿಸುತ್ತದೆ. ಅದಾಗಿ ಕೆಲವೇ ದಿನಗಳಲ್ಲಿ ಸೋಂಕಿತ ವ್ಯಕ್ತಿಯ ದೇಹದಲ್ಲಿರುವ ರಕ್ತದಲ್ಲಿ ಈ ವೈರಸ್​ ಲಕ್ಷಾಂತರ ವೈರಸ್​ಗಳಾಗಿ ಪರಿವರ್ತನೆಯಾಗುತ್ತದೆ. ಆ ವೇಳೆ ಸೋಂಕಿತನ ದೇಹದಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳು ಶುರುವಾಗುತ್ತವೆ. ಈ ವೈರಸ್​ ದೇಹದಲ್ಲಿನ ಬಿಳಿ ರಕ್ತಕಣಗಳನ್ನು ನಾಶ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

error: Content is protected !! Not allowed copy content from janadhvani.com